ವಾರಾಣಸಿ (ಉತ್ತರಪ್ರದೇಶ):ಕಾಶಿ ವಿಶ್ವನಾಥನ ಹಳೆಯ ದೇಗುಲ ಎಂದೇ ಹೇಳಲಾಗುವ ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ನಡೆಯುತ್ತಿರುವ ಪೂಜೆಯನ್ನು ನಿಲ್ಲಿಸಬೇಕು ಎಂದು ಕೋರಿ ಮುಸ್ಲಿಂ ಪಕ್ಷದವರು ಸಲ್ಲಿಸಿದ ತಕರಾರು ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು (ಮಂಗಳವಾರ) ವಿಚಾರಣೆ ನಡೆಸಲಿದೆ.
ಸನಾತನ ಧರ್ಮದ ಪದ್ಧತಿಗಳಂತೆ ಜ್ಞಾನವಾಪಿಯಲ್ಲಿ ನಡೆಯುತ್ತಿರುವ ಪೂಜೆಗೆ ಅವಕಾಶ ನೀಡಿದ ವಾರಾಣಸಿ ಜಿಲ್ಲಾ ಕೋರ್ಟ್ನ ಆದೇಶವನ್ನು ರದ್ದು ಮಾಡಬೇಕು ಎಂದು ಅಲಹಾಬಾದ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಕೋರ್ಟ್ ಇನ್ನು ಅಮಾನ್ಯ ಮಾಡಿ, ಪೂಜಾ ಪದ್ಧತಿಯನ್ನು ಮುಂದುವರಿಸಲು ಸೂಚಿಸಿತ್ತು. ಇದರ ವಿರುದ್ಧ ಅಂಜುಮನ್ ಮಸೀದಿ ಸಮಿತಿಯು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಇದರ ವಿಶೇಷ ವಿಚಾರಣೆ ಇಂದು ಜರುಗಲಿದೆ.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಪರ ಮತ್ತು ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಲಿಖಿತ ವಾದಗಳನ್ನು ಮಂಡಿಸಲಾಗಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ವಿಭಾಗೀಯ ಪೀಠವು ಪ್ರಕರಣದ ವಿಚಾರಣೆ ನಡೆಸಲಿದೆ ಎಂದು ಹೇಳಲಾಗಿದೆ.
ಅಲಹಾಬಾದ್ ಹೈಕೋರ್ಟ್ ತೀರ್ಪೇನು?:ಮಸೀದಿಯ ದಕ್ಷಿಣ ಭಾಗದಲ್ಲಿರುವ ನೆಲಮಾಳಿಗೆಯಲ್ಲಿ ಹಿಂದೂಗಳು ಪೂಜೆ ಸಲ್ಲಿಸಬಹುದು. ಉತ್ತರ ಭಾಗದಲ್ಲಿರುವ ನೆಲಮಾಳಿಗೆಯಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಬಹುದು ಎಂದು ವಾರಾಣಸಿ ಜಿಲ್ಲಾ ನ್ಯಾಯಾಲಯವು ಈ ಹಿಂದೆ ತೀರ್ಪು ನೀಡಿತ್ತು. ಪೂಜಾ ವಿಧಾನಗಳಿಗೆ ಅಡ್ಡಿಯಾಗದಂತೆ ಜಿಲ್ಲಾಧಿಕಾರಿ ನೇತೃತ್ವ ವಹಿಸಲೂ ಸೂಚಿಸಿತ್ತು. ಅದರಂತೆ ನಿತ್ಯ ಪೂಜೆ ಸಾಗುತ್ತಿದೆ.