ನವದೆಹಲಿ:ಗರ್ಭಪಾತಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪನ್ನು ಬುಧವಾರ ನೀಡಿದೆ. 20 ವರ್ಷದ ಅವಿವಾಹಿತೆ ತನ್ನ ಒಡಲಿನಲ್ಲಿ ಬೆಳೆಯುತ್ತಿರುವ 27 ವಾರಗಳ ಮಗುವಿನ ಗರ್ಭಪಾತಕ್ಕೆ ಅವಕಾಶ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿತು.
ಜೊತೆಗೆ, ಒಡಲಲ್ಲಿರುವ ಮಗುವಿಗೂ ಬದುಕುವ ಹಕ್ಕಿದೆ. ಹೀಗಾಗಿ ಗರ್ಭಪಾತಕ್ಕೆ ಅವಕಾಶ ನೀಡಲಾಗದು ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಎಸ್.ವಿ.ಎನ್. ಭಟ್ಟಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಹೇಳಿತು. ನ್ಯಾಯಾಲಯವು ಕಾನೂನಿಗೆ ವಿರುದ್ಧವಾಗಿ ಯಾವುದೇ ಆದೇಶವನ್ನು ನೀಡಲು ಸಾಧ್ಯವಿಲ್ಲ ಎಂದಿತು.
ಬದುಕುವುದು ಮೂಲಭೂತ ಹಕ್ಕಲ್ಲವೇ?:ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿದ ಪೀಠವು, ಗರ್ಭದಲ್ಲಿರುವ ಮಗುವಿಗೆ ಬದುಕುವ ಮೂಲಭೂತ ಹಕ್ಕಿದೆಯಲ್ಲವೇ, ಗರ್ಭಪಾತಕ್ಕೆ ಹೇಗೆ ಅವಕಾಶ ನೀಡಬೇಕು ಎಂದು ಪ್ರಶ್ನಿಸಿದಾಗ, ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ (ಎಂಟಿಪಿ) ಕಾಯಿದೆಯು ತಾಯಿಗೆ ಮಾತ್ರ ಸಂಬಂಧಿಸಿದ್ದಾಗಿದೆ ಎಂದು ವಕೀಲರು ವಾದಿಸಿದರು.
ಗರ್ಭಾವಸ್ಥೆಯ ಅವಧಿಯು ಈಗ 7 ತಿಂಗಳು ಮೀರಿದೆ. ಈ ಹಂತದಲ್ಲಿದ್ದಾಗ ಮಗುವಿನ ಬದುಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಅದರ ಹಕ್ಕಿನ ಹರಣ ಮಾಡಿದಂತಾಗುತ್ತದೆ ಎಂದು ಪೀಠದ ಅಭಿಪ್ರಾಯಕ್ಕೆ, ಮಹಿಳೆಯ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನೂ ಪರಿಗಣಿಸಬೇಕು ಎಂದು ವಕೀಲರು ಮನವಿ ಮಾಡಿದರು.
ಅವಿವಾಹಿತೆ ತೀವ್ರ ಆಘಾತದಲ್ಲಿದ್ದಾರೆ. ಅದರಿಂದ ಹೊರಬರಲು ಸಾಧ್ಯವಿಲ್ಲ. ವಿವಾಹಕ್ಕೂ ಮೊದಲು ಗರ್ಭಧಾರಣೆ ಮಾಡಿದ್ದು, ಸಮಾಜವನ್ನು ಆಕೆ ಎದುರಿಸಲು ಸಾಧ್ಯವಿಲ್ಲ ಎಂದು ವಕೀಲರು ವಾದಿಸಿದರೆ, ಈ ಕಾರಣಕ್ಕಾಗಿ ಮಾತ್ರ ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಪೀಠವು ಗರ್ಭಪಾತಕ್ಕೆ ನಿರಾಕರಿಸಿತು.
ಗರ್ಭಪಾತ ನಿರಾಕರಿಸಿದ್ದ ಹೈಕೋರ್ಟ್:ಇದಕ್ಕೂ ಮೊದಲು ಅವಿವಾಹಿತೆ ಗರ್ಭಪಾತಕ್ಕಾಗಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಳು. ಆದರೆ, ಆಕೆಯ ಮನವಿಯನ್ನು ಕೋರ್ಟ್ ತಿರಸ್ಕರಿಸಿತ್ತು. ಜೊತೆಗೆ ಭ್ರೂಣ ಮತ್ತು ಅವಿವಾಹಿತೆಯ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಲು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್) ಗೆ ಸೂಚಿಸಿತ್ತು.
ತಪಾಸಣೆ ನಡೆಸಿದ್ದ ವೈದ್ಯಕೀಯ ಮಂಡಳಿಯು, ಭ್ರೂಣದಲ್ಲಿ ಯಾವುದೇ ಅಸಹಜತೆ ಇಲ್ಲ. ಗರ್ಭಧಾರಣೆ ಮುಂದುವರಿಸಿದಲ್ಲಿ ತಾಯಿಗೂ ಯಾವುದೇ ಅಪಾಯವಿಲ್ಲ ಎಂದು ವರದಿ ನೀಡಿತ್ತು. ಇದರ ವಿರುದ್ಧ ಆ ಅವಿವಾಹಿತೆ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಅಲ್ಲಿಯೂ ಅವಕಾಶ ನಿರಾಕರಿಸಲಾಗಿದೆ.
ಎಂಟಿಪಿ ಕಾಯ್ದೆ ನಿಯಮವೇನು?:MTP ಕಾಯ್ದೆಯು ತಾಯಿಗೆ ಗರ್ಭಪಾತಕ್ಕೆ ಅವಕಾಶ ನೀಡಬೇಕೆ ಬೇಡವೇ ಎಂಬುದನ್ನು ವಿವರಿಸುತ್ತದೆ. ವೈದ್ಯಕೀಯ ಮಂಡಳಿಯ ನಿರ್ಣಯದ ಬಳಿಕ ಭ್ರೂಣದ ಅಸಹಜ ಬೆಳವಣಿಗೆ, ಗರ್ಭಿಣಿ ಮಹಿಳೆಯ ಜೀವ ಉಳಿಸುವ ಉದ್ದೇಶಕ್ಕಾಗಿ ಮಾತ್ರ 24 ವಾರಗಳನ್ನು ಮೀರಿದ ಅವಧಿಯ ಗರ್ಭಪಾತಕ್ಕೆ ಅವಕಾಶ ನೀಡಲಾಗುತ್ತದೆ.
ಇದನ್ನೂ ಓದಿ:ಅತ್ಯಾಚಾರ ಸಂತ್ರಸ್ತರಿಗೆ 28 ವಾರಗಳ ನಂತರ ಗರ್ಭಪಾತಕ್ಕೆ ಸುಪ್ರೀಂ ಅವಕಾಶ - termination of 28 weeks pregnancy