ಕರ್ನಾಟಕ

karnataka

ETV Bharat / bharat

ಟೆಕ್ಕಿ ಅತುಲ್​ ಸುಭಾಷ್​ ಪುತ್ರ ಯಾರ ಸುಪರ್ದಿಗೆ? ವಿಚಾರಣೆಯಲ್ಲಿ ಸುಪ್ರೀಂಕೋರ್ಟ್​ ಹೇಳಿದ್ದೇನು? - ATUL SUBASH CASE

ಟೆಕ್ಕಿ ಅತುಲ್​ ಸುಭಾಷ್​ ಅವರ 4 ವರ್ಷದ ಬಾಲಕನನ್ನು ಅಜ್ಜಿ ಮತ್ತು ಆರೋಪಿ ತಾಯಿಯಲ್ಲಿ ಯಾರ ಆರೈಕೆಗೆ ನೀಡಬೇಕು ಎಂಬ ಕುರಿತು ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದೆ.

ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್ (ETV Bharat)

By ETV Bharat Karnataka Team

Published : Jan 7, 2025, 10:41 PM IST

ನವದೆಹಲಿ:ಪತ್ನಿಯ ಕಿರುಕುಳದ ಆರೋಪದಿಂದ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ ಅತುಲ್​ ಸುಭಾಷ್ ಅವ​ರ 4 ವರ್ಷದ ಮಗನನ್ನು ತಮ್ಮ ಸುಪರ್ದಿಗೆ ನೀಡಬೇಕು ಎಂದು ಕೋರಿ ಆತನ ಕುಟುಂಬಸ್ಥರು ಸುಪ್ರೀಂಕೋರ್ಟ್​ಗೆ ಸಲ್ಲಿಸಿದ ಅರ್ಜಿಯ ವಿಚಾರಣೆ ಮಂಗಳವಾರ ನಡೆಯಿತು.

ಮೃತ ಟೆಕ್ಕಿಯ ತಾಯಿ ಮತ್ತು ಮಗುವಿನ ಅಜ್ಜಿಯೂ ಆದ ಅಂಜು ದೇವಿ ಅವರು ಮಗುವಿನ ಪಾಲನೆ, ಪೋಷಣೆಯನ್ನು ನಾವು ನೋಡಿಕೊಳ್ಳುತ್ತೇವೆ. ತನ್ನ ಮೊಮ್ಮಗನನ್ನು ಆರೋಪಿ ತಾಯಿಯ ವಶಕ್ಕೆ ನೀಡಬಾರದು ಎಂದು ವಾದಿಸಿದ್ದಾರೆ.

ಆದರೆ, 4 ವರ್ಷದ ಮಗು ಅಜ್ಜಿಗೆ ಇನ್ನೂ ಅಪರಿಚಿತವಾಗಿದೆ. ಅತುಲ್​ ಅವರ ಪತ್ನಿ ನಿಕಿತಾ ಸಿಂಘಾನಿಯಾ ಅಪರಾಧಿ ಎಂದು ಇನ್ನೂ ಸಾಬೀತಾಗಿಲ್ಲ. ಹೀಗಾಗಿ ಮಗುವನ್ನು ಯಾರ ಸುಪರ್ದಿಗೆ ನೀಡಬೇಕು ಎಂದು ನಿರ್ಧರಿಸಲು ಮತ್ತಷ್ಟು ಸಮಯ ಬೇಕು ಎಂದು ನ್ಯಾಯಮೂರ್ತಿ ಬಿ. ವಿ. ನಾಗರತ್ನ ಅವರಿದ್ದ ಪೀಠ ಹೇಳಿದೆ.

ತನ್ನ ಮೊಮ್ಮಗ ಇನ್ನೂ 4 ವರ್ಷದವನಿದ್ದಾನೆ. ಹೀಗಾಗಿ ಆತನನ್ನು ಬೋರ್ಡಿಂಗ್​ ಶಾಲೆಗೆ ಹಾಕಬಾರದು. ತನ್ನ ಕಣ್ಣ ಮುಂದೆ ಬೆಳೆಯಲಿ. ಹೀಗಾಗಿ ಮಗುವನ್ನು ನನಗೆ ಕೊಡಿಸಿ ಎಂದು ಅಜ್ಜಿ ಅಂಜುದೇವಿ ಅವರು ಕೋರ್ಟ್ ಮುಂದೆ ಭಿನ್ನವಿಸಿಕೊಂಡಿದ್ದಾರೆ.

ಮಕ್ಕಳ ಪಾಲನೆ ವಿಚಾರವು ಸೂಕ್ಷ್ಮವಾಗಿರುವ ಕಾರಣ ಸೂಕ್ತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕಾಗುತ್ತದೆ. ಸಾಧ್ಯವಾದರೆ, ಒಮ್ಮೆ ಮಗುವನ್ನು ಕೋರ್ಟ್​ಗೆ ಹಾಜರುಪಡಿಸಿ ಎಂದು ಅಂಜು ದೇವಿ ಅವರ ಪರ ವಕೀಲರಿಗೆ ಕೋರ್ಟ್​ ಸೂಚಿಸಿತು. ಜೊತೆಗೆ, ಮಗುವಿನ ಪಾಲನೆಗೆ ಸಂಬಂಧಿಸಿದಂತೆ ಹರಿಯಾಣ ಸರ್ಕಾರ ಮತ್ತು ಮಗುವಿನ ತಾಯಿಯಿಂದ ಅಫಿಡವಿಟ್ ಸಲ್ಲಿಸಲು ತಾಕೀತು ಮಾಡಿ, ಮುಂದಿನ ವಿಚಾರಣೆಯನ್ನು ಜನವರಿ 20ಕ್ಕೆ ನಿಗದಿಪಡಿಸಿದೆ.

ಹರಿಯಾಣ ಬೋರ್ಡ್​ ಶಾಲೆಯಲ್ಲಿ ಬಾಲಕ :ಇದೇ ವೇಳೆ, ಮಗುವಿನ ಬಗ್ಗೆ ಕೋರ್ಟ್​ ಕೇಳಿದ್ದ ಮಾಹಿತಿಯನ್ನು ಆರೋಪಿ ಪತ್ನಿ ನಿಕಿತಾ ಸಿಂಘಾನಿಯಾ ಸಲ್ಲಿಸಿದ್ದಾರೆ. ಸದ್ಯ ಬಾಲಕ ಹರಿಯಾಣದ ಫರಿದಾಬಾದ್‌ನ ಬೋರ್ಡಿಂಗ್ ಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದಾನೆ ಎಂದು ಮಂಗಳವಾರ ಮಾಹಿತಿ ತಿಳಿಸಿದ್ದಾರೆ.

ಸಿಂಘಾನಿಯಾ ಅವರ ಪರ ವಕೀಲರು ನ್ಯಾಯಮೂರ್ತಿ ಬಿ. ವಿ. ನಾಗರತ್ನ ನೇತೃತ್ವದ ಪೀಠಕ್ಕೆ ಬಾಲಕನ ಬಗ್ಗೆ ವರದಿ ನೀಡಿದ್ದು, ಬೆಂಗಳೂರಿಗೆ ಕರೆದೊಯ್ದು ಅಲ್ಲಿಯೇ ತನ್ನ ತಾಯಿಯೊಂದಿಗೆ ಉಳಿಸಿಕೊಳ್ಳುವುದಾಗಿ ವಕೀಲರು ಮನವಿ ಮಾಡಿದರು.

ಉತ್ತರಪ್ರದೇಶ ಮೂಲದ ಟೆಕ್ಕಿ ಅತುಲ್​ ಸುಭಾಷ್​ ಅವರು ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದರು. ಪತ್ನಿ ನಿಕಿತಾ ಸಿಂಘಾನಿಯಾ ಮತ್ತು ಅವರ ಕುಟುಂಬಸ್ಥರು ತಮ್ಮ ವಿರುದ್ಧ ಸುಳ್ಳು ಆರೋಪಗಳ ಕೇಸ್​ ದಾಖಲಿಸಿ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ದೂರಿ, 2024 ರ ಡಿಸೆಂಬರ್​ನಲ್ಲಿ ವಿಡಿಯೋ ಚಿತ್ರೀಕರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಸದ್ಯ ಅವರಿಗೆ ಕೋರ್ಟ್​ ಜಾಮೀನು ನೀಡಿದೆ.

ಇದನ್ನೂ ಓದಿ:ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಕೇಸ್​: ಪತ್ನಿ, ಸಂಬಂಧಿಕರ ವಿರುದ್ಧದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಣೆ

ABOUT THE AUTHOR

...view details