ಕರ್ನಾಟಕ

karnataka

ETV Bharat / bharat

ಬ್ಯಾಲೆಟ್ ಪೇಪರ್ ಮತದಾನ ಮರು ಜಾರಿ ಕೋರಿದ್ದ ಅರ್ಜಿ ಸುಪ್ರೀಂನಿಂದ ವಜಾ; ಸೋತಾಗ ತಪ್ಪು, ಗೆದ್ದಾಗ ಸರಿ, ಇದು ಹೇಗೆ?- ಕೋರ್ಟ್​ ಪ್ರಶ್ನೆ

ಬ್ಯಾಲೆಟ್ ಪೇಪರ್ ಮತದಾನವನ್ನು ಮರು ಜಾರಿ ಮಾಡಬೇಕೆಂದು ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ಬ್ಯಾಲೆಟ್ ಪೇಪರ್ ಮತದಾನ ಮರು ಜಾರಿ ಕೋರಿದ್ದ ಅರ್ಜಿ ಸುಪ್ರೀಂ ಕೋರ್ಟ್​ನಿಂದ ವಜಾ
ಬ್ಯಾಲೆಟ್ ಪೇಪರ್ ಮತದಾನ ಮರು ಜಾರಿ ಕೋರಿದ್ದ ಅರ್ಜಿ ಸುಪ್ರೀಂ ಕೋರ್ಟ್​ನಿಂದ ವಜಾ (IANS)

By PTI

Published : Nov 26, 2024, 3:09 PM IST

ನವದೆಹಲಿ: ದೇಶದ ಚುನಾವಣೆಗಳಲ್ಲಿ ಈ ಹಿಂದಿನಂತೆ ಬ್ಯಾಲೆಟ್ ಪೇಪರ್ ಮೂಲಕವೇ ಮತದಾನ ನಡೆಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.

"ನೀವು ಚುನಾವಣೆಗಳಲ್ಲಿ ಗೆದ್ದಾಗ ಇವಿಎಂಗಳನ್ನು ತಿರುಚಲಾಗುವುದಿಲ್ಲ, ಆದರೆ, ಅದೇ ನೀವು ಚುನಾವಣೆಗಳಲ್ಲಿ ಸೋತರೆ ಆವಾಗ ಇವಿಎಂಗಳನ್ನು ತಿರುಚಲಾಗುತ್ತದೆ" ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಪಿ ಬಿ ವರಲೆ ಅವರ ನ್ಯಾಯಪೀಠ ಹೇಳಿತು.

ಬ್ಯಾಲೆಟ್ ಪೇಪರ್ ಮತದಾನದ ಜೊತೆಗೆ ಮತದಾನದ ಸಮಯದಲ್ಲಿ ಮತದಾರರಿಗೆ ಹಣ, ಮದ್ಯ ಅಥವಾ ಇತರ ವಸ್ತುಗಳನ್ನು ವಿತರಿಸಿದ್ದು ಸಾಬೀತಾದರೆ ಅಂಥ ಅಭ್ಯರ್ಥಿಗಳನ್ನು ಕನಿಷ್ಠ ಐದು ವರ್ಷಗಳವರೆಗೆ ಅನರ್ಹಗೊಳಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವುದು ಸೇರಿದಂತೆ ಹಲವಾರು ನಿರ್ದೇಶನಗಳನ್ನು ಅರ್ಜಿಯಲ್ಲಿ ಕೋರಲಾಗಿದೆ.

ಇಂತಹ ಐಡಿಯಾಗಳು ಎಲ್ಲಿಂದ ಬರುತ್ತವೆ?:ಅರ್ಜಿದಾರ ಕೆ.ಎ.ಪಾಲ್ ಅವರು ಸ್ವತಃ ತಾವೇ ಪಿಐಎಲ್ ಸಲ್ಲಿಸಿರುವುದಾಗಿ ಹೇಳಿದಾಗ ಪ್ರತಿಕ್ರಿಯಿಸಿದ ನ್ಯಾಯಪೀಠ, "ನಿಮ್ಮ ಪಿಐಎಲ್​ಗಳು ಆಸಕ್ತಿದಾಯವಾಗಿರುತ್ತವೆ. ಇಂಥ ಅದ್ಭುತ ಐಡಿಯಾಗಳು ನಿಮಗೆ ಎಲ್ಲಿಂದ ಬರುತ್ತವೆ?" ಎಂದು ಕೇಳಿತು.

ಇದಕ್ಕುತ್ತರಿಸಿದ ಪಾಲ್, ನಾನು ಮೂರು ಲಕ್ಷಕ್ಕೂ ಹೆಚ್ಚು ಅನಾಥರು ಮತ್ತು 40 ಲಕ್ಷ ವಿಧವೆಯರನ್ನು ರಕ್ಷಿಸಿದ ಸಂಘಟನೆಯ ಅಧ್ಯಕ್ಷನಾಗಿದ್ದೇನೆ ಎಂದರು. "ಹಾಗಾದರೆ ನೀವು ಈ ರಾಜಕೀಯ ವಿಚಾರಗಳಲ್ಲಿ ಏಕೆ ಪ್ರವೇಶಿಸಿರುವಿರಿ? ನಿಮ್ಮ ಕೆಲಸದ ಕ್ಷೇತ್ರವು ಬೇರೆಯೇ ಆಗಿದೆಯಲ್ಲ" ಎಂದು ನ್ಯಾಯಪೀಠ ತಿರುಗೇಟು ನೀಡಿತು.

150 ದೇಶಗಳಿಗೆ ಭೇಟಿ ನೀಡಿರುವುದಾಗಿ ಹೇಳಿದ ಅರ್ಜಿದಾರರಿಗೆ ಸುಪ್ರೀಂ ಮರು ಪ್ರಶ್ನೆ:ಪಾಲ್ ತಾವು 150 ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿರುವುದಾಗಿ ಹೇಳಿದ ನಂತರ, ಎಲ್ಲಾ ರಾಷ್ಟ್ರಗಳಲ್ಲಿ ಬ್ಯಾಲೆಟ್ ಪೇಪರ್ ಮತದಾನವೇ ಜಾರಿಯಲ್ಲಿದೆಯೇ ಎಂದು ನ್ಯಾಯಪೀಠ ಕೇಳಿತು. ಕೆಲ ದೇಶಗಳಲ್ಲಿ ಬ್ಯಾಲೆಟ್ ಪೇಪರ್ ಮತದಾನವಿದ್ದು, ಅದರಂತೆ ಭಾರತವೂ ಇದನ್ನು ಅನುಸರಿಸಬೇಕು ಎಂದು ಅರ್ಜಿದಾರರು ಹೇಳಿದರು.

ಬ್ಯಾಲೆಟ್​ ಪೇಪರ್​ ಮತದಾನ ಜಾರಿಗೆ ತಂದೆ ಭ್ರಷ್ಟಾಚಾರ ನಿಲುತ್ತದೆಯೇ?:"ಹಾಗಾದರೆ ಜಗತ್ತಿಗಿಂತ ವಿಭಿನ್ನವಾಗಿರುವುದು ನಿಮಗೇಕೆ ಇಷ್ಟವಿಲ್ಲ?" ಎಂದು ನ್ಯಾಯಪೀಠ ಕೇಳಿತು. ಭ್ರಷ್ಟಾಚಾರ ನಡೆಯುತ್ತಿದೆ ಮತ್ತು ಈ ವರ್ಷ (2024) ಜೂನ್ ನಲ್ಲಿ, ಚುನಾವಣಾ ಆಯೋಗವು 9,000 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದೆ ಎಂದು ಪಾಲ್ ಪ್ರತಿಕ್ರಿಯಿಸಿದರು.

"ಆದರೆ ನಿಮ್ಮ ಮನವಿಗೂ ಅದಕ್ಕೂ ಏನು ಸಂಬಂಧ?" ಎಂದು ಪ್ರಶ್ನಿಸಿದ ನ್ಯಾಯಪೀಠ, "ಒಂದೊಮ್ಮೆ ಬ್ಯಾಲೆಟ್ ಪೇಪರ್ ಮತದಾನವನ್ನು ಜಾರಿಗೆ ತಂದಿದ್ದೇ ಆದಲ್ಲಿ ಆಗ ಭ್ರಷ್ಟಾಚಾರ ಸಂಪೂರ್ಣ ನಿಂತು ಹೋಗುತ್ತದೆಯೇ?" ಎಂದು ಕೇಳಿತು.

ಸೋತಾಗ ತಿರುಚಬಹುದು, ಗೆದ್ದಾರೆ ಅವು ಸರಿ ಇವೆಯೇ?:ಟೆಸ್ಲಾ ಸಿಇಒ ಮತ್ತು ಸಹ ಸಂಸ್ಥಾಪಕ ಎಲೋನ್ ಮಸ್ಕ್ ಅವರು ಇವಿಎಂಗಳನ್ನು ತಿರುಚಬಹುದು ಎಂದು ಹೇಳಿದ್ದಾರೆ ಮತ್ತು ಆಂಧ್ರಪ್ರದೇಶದ ಪ್ರಸ್ತುತ ಮುಖ್ಯಮಂತ್ರಿ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಮತ್ತು ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಕೂಡ ಇವಿಎಂಗಳನ್ನು ತಿರುಚಬಹುದು ಎಂದು ಹೇಳಿದ್ದಾರೆ ಎಂದು ಪಾಲ್ ಹೇಳಿದರು.

"ಚಂದ್ರಬಾಬು ನಾಯ್ಡು ಸೋತಾಗ, ಇವಿಎಂಗಳನ್ನು ತಿರುಚಬಹುದು ಎಂದು ಹೇಳಿದ್ದರು. ಈಗ ಈ ಬಾರಿ ಜಗನ್ ಮೋಹನ್ ರೆಡ್ಡಿ ಸೋತಿದ್ದಾರೆ. ಅದಕ್ಕೇ ಈ ಬಾರಿ ಅವರು ಹಾಗೆ ಹೇಳಿದ್ದಾರೆ" ಎಂದು ನ್ಯಾಯಪೀಠ ಹೇಳಿತು.

ಇದನ್ನೂ ಓದಿ : ಚುನಾವಣೆ ಮುಗಿದ ಬೆನ್ನಲ್ಲೇ ರಶ್ಮಿ ಶುಕ್ಲಾ ಮಹಾರಾಷ್ಟ್ರ ಡಿಜಿಪಿಯಾಗಿ ಮರುನೇಮಕ

ABOUT THE AUTHOR

...view details