ನವದೆಹಲಿ:ಅಬಕಾರಿ ನೀತಿ ಪ್ರಕರಣದಲ್ಲಿ ಜೈಲು ಪಾಲಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂಕೋರ್ಟ್ನಲ್ಲೂ ಹಿನ್ನಡೆ ಉಂಟಾಗಿದೆ. ಸಿಎಂಗೆ ಮಧ್ಯಂತರ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ. ಗುರುವಾರ ಅಥವಾ ಮುಂದಿನ ವಾರ ಪ್ರಕರಣದ ವಿಚಾರಣೆ ನಡೆಯುವ ಸಾಧ್ಯತೆಯಿದೆ.
ಜಾಮೀನು ನೀಡಲು ನಿರಾಕರಿಸಿದ್ದ ದೆಹಲಿ ಹೈಕೋರ್ಟ್ ವಿರುದ್ಧ ದೆಹಲಿ ಸಿಎಂ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಇಂದು ನಡೆದ ವಿಚಾರಣೆಯಲ್ಲಿ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿ ದೀಪಾಂಕರ್ ದತ್ತ ನೇತೃತ್ವದ ಪೀಠವೂ ಜಾಮೀನು ನೀಡಲು ಒಪ್ಪಲಿಲ್ಲ.
ವಿಚಾರಣೆಯಲ್ಲಿ ನಡೆದ ವಾದ ಸರಣಿ:ದೆಹಲಿ ಸಿಎಂಗೆ ಜಾಮೀನು ನೀಡಿದರೆ ಅವರು ಸಿಎಂ ಆಗಿ ಕೆಲಸ ಮಾಡಲು ಸಾಧ್ಯವಿಲ್ಲ. ಅವರ ಮೇಲೆ ಗಂಭೀರ ಆರೋಪ ಇರುವಾಗ ಹೇಗೆ ಅವರು ಸಿಎಂ ಕಚೇರಿಗೆ ತೆರಳಿ ಕೆಲಸ ನಿರ್ವಹಿಸುತ್ತಾರೆ. ಇದು ಇತರ ಪ್ರಕರಣಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಎಎಂ ಸಿಂಘ್ವಿ, ದೆಹಲಿಯಲ್ಲಿ ಮುಖ್ಯಮಂತ್ರಿ ಇಲ್ಲದ ಸರ್ಕಾರ ನಡೆಯುತ್ತಿದೆ. ಇದನ್ನು ಹೀಗೆಯೇ ಮುಂದುವರಿಸಬೇಕೆ?. ಜಾಮೀನು ಸಿಕ್ಕಲ್ಲಿ ಅವರು ಯಾವುದೇ ಕಡತಗಳಿಗೆ ಸಹಿ ಮತ್ತು ನಿರ್ದೇಶನ ನೀಡುವುದಿಲ್ಲ ಎಂದು ಆಶ್ವಾಸನೆ ನೀಡಿದರು.