ನವದೆಹಲಿ:ದಾರಿ ತಪ್ಪಿಸುವ ಜಾಹೀರಾತು ಪ್ರಕರಣದಲ್ಲಿ ಯೋಗ ಗುರು ರಾಮ್‌ದೇವ್, ಅವರ ಆಪ್ತ ಬಾಲಕೃಷ್ಣ ಮತ್ತು ಪತಂಜಲಿ ಆಯುರ್ವೇದ ಲಿಮಿಟೆಡ್‌ನಿಂದ ಕ್ಷಮಾಪಣೆ ಕೋರಿದ ಬಳಿಕ ನ್ಯಾಯಾಂಗ ನಿಂದನೆ ಕೇಸ್ ಅನ್ನು ಸುಪ್ರೀಂ ಕೋರ್ಟ್ ಮಂಗಳವಾರ ಮುಕ್ತಾಯಗೊಳಿಸಿದೆ.
ರಾಮ್‌ದೇವ್, ಬಾಲಕೃಷ್ಣ ಮತ್ತು ಪತಂಜಲಿ ಆಯುರ್ವೇದ ಲಿಮಿಟೆಡ್‌ಗಳು ಕೋರಿದ ಕ್ಷಮೆಯನ್ನು ಕೋರ್ಟ್ ಅಂಗೀಕರಿಸಿದೆ. ಇದರಿಂದ ನ್ಯಾಯಾಂಗ ನಿಂದನೆ ಆರೋಪದಿಂದ ಸಂಸ್ಥೆಯನ್ನು ಖುಲಾಸೆ ಮಾಡಿದೆ ಎಂದು ಪತಂಜಲಿ ಸಂಸ್ಥೆಯ ಪರ ವಕೀಲ ಗೌತಮ್ ತಾಲೂಕ್ದಾರ್ ತಿಳಿಸಿದರು.
ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠವು ಪ್ರಕರಣದಲ್ಲಿ ರಾಮ್‌ದೇವ್, ಬಾಲಕೃಷ್ಣ ಮತ್ತು ಪತಂಜಲಿ ಆಯುರ್ವೇದ ಲಿಮಿಟೆಡ್‌ಗೆ ನೀಡಲಾದ ನ್ಯಾಯಾಂಗ ನಿಂದನೆ ನೋಟಿಸ್‌ನ ಆದೇಶವನ್ನು ಮೇ 14 ರಂದು ಕಾಯ್ದಿರಿಸಿತ್ತು. ಅಂತಿಮವಾಗಿ ಈಗ ಪ್ರಕರಣವನ್ನು ಅಂತ್ಯಗೊಳಿಸಿದೆ.
ಪತಂಜಲಿ ವಿರುದ್ಧದ ದೂರೇನು?:ಕೋವಿಡ್ ಲಸಿಕೆ ಮತ್ತು ಅಲೋಪತಿ ವೈದ್ಯಕೀಯ ಚಿಕಿತ್ಸೆಯ ವಿರುದ್ಧ ಪತಂಜಲಿ ಸಂಸ್ಥೆಯು ತಪ್ಪು ಮಾಹಿತಿಯುಳ್ಳ ಜಾಹೀರಾತನ್ನು ಪ್ರಕಟಿಸಿತ್ತು. ಇದನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘವು (ಐಎಂಎ) ಸುಪ್ರೀಂ ಕೋರ್ಟ್ಗೆ ದೂರು ನೀಡಿತ್ತು.
ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್, ಜಾಹೀರಾತನ್ನು ತಡೆ ಹಿಂಪಡೆಯುವಂತೆ ಸೂಚಿಸಿತ್ತು. ಇದಾದ ಬಳಿಕವೂ ಪತಂಜಲಿ ಸಂಸ್ಥೆ ಜಾಹೀರಾತನ್ನು ಪ್ರಕಟಿಸಿತ್ತು. ಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದರಿಂದ ಆಯುರ್ವೇದ ಸಂಸ್ಥೆಯ ಮೇಲೆ ನ್ಯಾಯಾಂಗ ನಿಂದನೆ ಆರೋಪ ಹೊರಿಸಲಾಗಿತ್ತು. ಆದೇಶವನ್ನು ಧಿಕ್ಕರಿಸಿದ್ದರಿಂದ ನ್ಯಾಯಪೀಠವು ಕ್ರುದ್ಧವಾಗಿತ್ತು.
ರಾಮ್‌ದೇವ್ ಕ್ಷಮಾಪಣೆ:ಪ್ರಕರಣದಲ್ಲಿ ಯೋಗ ಗುರು ಬಾಬಾ ರಾಮ್‌ದೇವ್, ಪತಂಜಲಿ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರನ್ನು ಆರೋಪಿಯನ್ನಾಗಿ ಕೋರ್ಟ್ ಪರಿಗಣಿಸಿತ್ತು. ಹಲವು ಬಾರಿ ಛೀಮಾರಿಯ ಬಳಿಕ ಇಬ್ಬರೂ ಕೋರ್ಟ್ ಮುಂದೆ ಕ್ಷಮೆ ಕೋರಿದ್ದರು. ಇದಕ್ಕೂ ಬಗ್ಗದ ಕೋರ್ಟ್, ಕೊನೆಗೆ ಶಿಕ್ಷೆ ವಿಧಿಸಲು ಮುಂದಾಗಿತ್ತು. ತಪ್ಪು ಮಾಹಿತಿ ಹರಡಿದ್ದಕ್ಕೆ ರಾಮ್‌ದೇವ್ ಅವರು ಸಾರ್ವಜನಿಕವಾಗಿ ಕ್ಷಮೆ ಕೋರಿ, ಅದನ್ನು ಪತ್ರಿಕೆ, ಮಾಧ್ಯಮಗಳಲ್ಲಿ ಪ್ರಕಟಿಸಿದ್ದರು. ಆ ಬಳಿಕವೇ ಕೋರ್ಟ್ ಇದನ್ನು ಅಂಗೀಕರಿಸಿದೆ.
ಇದನ್ನೂ ಓದಿ:ಪರವಾನಗಿ ರದ್ದಾದ 14 ಉತ್ಪನ್ನಗಳ ಮಾರಾಟ ಸ್ಥಗಿತ: ಸುಪ್ರೀಂ ಕೋರ್ಟ್ಗೆ ಪತಂಜಲಿ ಹೇಳಿಕೆ - Patanjali Ayurved Case