ಕರ್ನಾಟಕ

karnataka

ETV Bharat / bharat

ನಿವೃತ್ತ ಪೊಲೀಸ್ ಅಧಿಕಾರಿ ದೇಹದಲ್ಲಿ ಎರಡಲ್ಲ, ಮೂರು ಕಿಡ್ನಿಗಳು ಪತ್ತೆ: ಜಗತ್ತಿನ ವೈದ್ಯಕೀಯ ಇತಿಹಾಸದಲ್ಲೇ 100ನೇ ಪ್ರಕರಣ! - Supernumerary Kidney

ಮಧ್ಯಪ್ರದೇಶದ ಟೀಕಾಮ್‌ಗಢ ನಗರದ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ದೇಹದ ಬಲಭಾಗದಲ್ಲಿ ಎರಡು ಕಿಡ್ನಿ ಹಾಗೂ ಎಡಭಾಗದಲ್ಲಿ ಒಂದು ಕಿಡ್ನಿ ಸೇರಿ ಒಟ್ಟು ಮೂರು ಕಿಡ್ನಿಗಳು ಇರುವುದು ಪತ್ತೆಯಾಗಿದೆ.

Supernumerary Kidney Found In Body Of Retired Cop; Only 100 Such Registered Cases In World
ನಿವೃತ್ತ ಪೊಲೀಸ್ ಅಧಿಕಾರಿ ದೇಹದಲ್ಲಿ ಎರಡಲ್ಲ, ಮೂರು ಕಿಡ್ನಿಗಳು ಪತ್ತೆ

By ETV Bharat Karnataka Team

Published : Mar 9, 2024, 10:12 PM IST

ಟೀಕಾಮ್‌ಗಢ (ಮಧ್ಯಪ್ರದೇಶ): ಮಧ್ಯಪ್ರದೇಶದ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ದೇಹದಲ್ಲಿ ಮೂರು ಕಿಡ್ನಿಗಳು ಇರುವುದು ಪತ್ತೆಯಾಗಿದೆ. ಇದು ಪ್ರಕರಣವು ಪ್ರಪಂಚದಾದ್ಯಂತ ವೈದ್ಯಕೀಯ ವಿಜ್ಞಾನದ ಇತಿಹಾಸದಲ್ಲೇ ವರದಿಯಾದ 100ಕ್ಕಿಂತ ಕಡಿಮೆ ಪ್ರಕರಣಗಳಲ್ಲಿ ಒಂದಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ಮಾನವನ ದೇಹದಲ್ಲಿ ಎರಡು ಕಿಡ್ನಿ ಇರುತ್ತವೆ. ಆದರೆ, ಟೀಕಾಮ್‌ಗಢ ನಗರದ ನಿವಾಸಿ ಖಲೀಲ್ ಮೊಹಮ್ಮದ್ ಎಂಬುವರಲ್ಲಿ ಮೂರು ಕಿಡ್ನಿಗಳು ಕಂಡು ಬಂದಿವೆ. ಇದರಿಂದಲೇ ಇತ್ತೀಚಿನ ದಿನಗಳಲ್ಲಿ ಇವರು ಹೆಚ್ಚು ಸುದ್ದಿಯಾಗಿದ್ದಾರೆ. ನಿವೃತ್ತ ಪೊಲೀಸ್ ಇನ್ಸ್‌ಪೆಕ್ಟರ್ ಆಗಿರುವ ಇವರು, ಕ್ರೀಡಾಪ್ರೇಮಿ ಹಾಗೂ ಫುಟ್ಬಾಲ್ ಆಟಗಾರರೂ ಆಗಿದ್ದಾರೆ. ಇವರ ಹೊಟ್ಟೆಯಲ್ಲಿ ವಿಚಿತ್ರ ನೋವು, ಜುಮ್ಮೆನಿಸುವಿಕೆ, ಮೂತ್ರ ವಿಸರ್ಜನೆ ವೇಳೆ ಉರಿ ಕಾಣಿಸಿಕೊಳ್ಳುತ್ತಿತ್ತು.

ಮೊದಲಿಗೆ ಸಾಮಾನ್ಯ ಸಮಸ್ಯೆ ಎಂದು ಪರಿಗಣಿಸಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೂ, ಪರಿಹಾರ ಕಾಣದಿದ್ದಾಗ ಝಾನ್ಸಿಯ ತಜ್ಞ ವೈದ್ಯರನ್ನು ಮೊಹಮ್ಮದ್ ಸಂಪರ್ಕಿಸಿದ್ದರು. ಆಗ ದೇಹದಲ್ಲಿ ಮೂರು ಕಿಡ್ನಿಗಳಿರುವುದು ಗೊತ್ತಾಗಿದೆ. ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಸೂಪರ್‌ನ್ಯೂಮರರಿ ಕಿಡ್ನಿ ಎಂದು ಕರೆಯಲಾಗುತ್ತದೆ. ಜೊತೆಗೆ ವೈದ್ಯಕೀಯ ವಿಜ್ಞಾನದ ಇತಿಹಾಸದಲ್ಲಿ ಪ್ರಪಂಚದಾದ್ಯಂತ 100ಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗಿವೆ ಎಂದು ತಜ್ಞರು ಹೇಳುತ್ತಾರೆ.

ಬಲಭಾಗದಲ್ಲಿ 2, ಎಡಭಾಗದಲ್ಲಿ 1 ಕಿಡ್ನಿ:64 ವರ್ಷದ ಮೊಹಮ್ಮದ್​ ನಿವೃತ್ತಿಯ ನಂತರವೂ ಫಿಟ್ ಆಗಿರಲು ಕ್ರೀಡೆಯಲ್ಲಿ ಸಕ್ರಿಯರಾಗಿದ್ದರು. ಒಮ್ಮೆ ಫುಟ್ಬಾಲ್ ಆಡುತ್ತಿದ್ದಾಗ ಇದ್ದಕ್ಕಿದ್ದಂತೆ ಹೊಟ್ಟೆಯಲ್ಲಿ ವಿಚಿತ್ರವಾದ ನೋವು ಪ್ರಾರಂಭವಾಗಿತ್ತು. ಕ್ರಮೇಣ ದೇಹದಲ್ಲಿ ಜುಮ್ಮೆನಿಸುವಿಕೆ ಮತ್ತು ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿ ಉಂಟಾಗುತ್ತಿತ್ತು. ವೈದ್ಯರ ಸಲಹೆ ಪಡೆದು ಔಷಧ ಸೇವಿಸಿದರೂ ಪರಿಹಾರ ಸಿಕ್ಕಿರಲಿಲ್ಲ. ಆಗ ತಮ್ಮ ಕುಟುಂಬ ವೈದ್ಯರಾದ ಅನುರಾಗ್ ಜೈನ್ ಅವರು ಮೊಹಮ್ಮದ್​ ಅವರನ್ನು ತಜ್ಞ ವೈದ್ಯರ ಬಳಿಗೆ ಕರೆದೊಯ್ದಿದ್ದರು.

ಹಲವಾರು ಪರೀಕ್ಷೆಗಳ ನಂತರ ಮೊಹಮ್ಮದ್ ಮೂರು ಮೂತ್ರಪಿಂಡಗಳನ್ನು ಹೊಂದಿದ್ದು, ಇದರಿಂದಾಗಿ ಮೂತ್ರ ವಿಸರ್ಜನೆ ಸಮಯದಲ್ಲಿ ನೋವು ಮತ್ತು ಉರಿ ಅನುಭವಿಸುತ್ತಿದ್ದಾರೆ ಎಂದು ಕಂಡು ಬಂದಿದೆ. ಹೆಚ್ಚಿನ ತಪಾಸಣೆ ವೇಳೆ ದೇಹದ ಬಲಭಾಗದಲ್ಲಿ ಎರಡು ಕಿಡ್ನಿ ಹಾಗೂ ಎಡಭಾಗದಲ್ಲಿ ಒಂದು ಕಿಡ್ನಿ ಇರುವುದು ಪತ್ತೆಯಾಗಿದೆ.

ಇದರಿಂದ ವೈದ್ಯರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದು, ಮೂರನೇ ಕಿಡ್ನಿಯಿಂದ ಉಂಟಾಗುವ ನೋವನ್ನು ತಪ್ಪಿಸಲು ಕೆಳಗೆ ಬಾಗಬಾರದು. ಹೆಚ್ಚು ನೀರು ಕುಡಿಯಬೇಕು ಎಂದು ತಿಳಿಸಿದ್ದಾರೆ. ಅದರಂತೆ ದಿನಕ್ಕೆ 6 ರಿಂದ 7 ಲೀಟರ್ ನೀರು ಕುಡಿಯುತ್ತಾರೆ. ಸೈಕ್ಲಿಂಗ್, ಓಟ ಎಲ್ಲವನ್ನೂ ಮೊದಲಿನಂತೆಯೇ ಮಾಡುತ್ತಿದ್ದಾರೆ.

ವೈದ್ಯರು ಹೇಳಿದ್ದೇನು?:ಈ ಕುರಿತು ಕಿಡ್ನಿ ಕಸಿ ಶಸ್ತ್ರಚಿಕಿತ್ಸಕ ಡಾ.ರೋಹಿತ್ ನಾಮದೇವ್ ಮಾತನಾಡಿ, ಎರಡಕ್ಕಿಂತ ಹೆಚ್ಚು ಕಿಡ್ನಿಗಳಿದ್ದರೆ ಅದನ್ನು ಸೂಪರ್​ನ್ಯೂಮರರಿ ಕಿಡ್ನಿ ಎನ್ನುತ್ತಾರೆ. ವೈದ್ಯಕೀಯ ವಿಜ್ಞಾನದ ಇತಿಹಾಸದಲ್ಲಿ ಜಗತ್ತಿನಲ್ಲಿ ಇದುವರೆಗೆ 100ಕ್ಕಿಂತ ಕಡಿಮೆ ಇಂತಹ ಪ್ರಕರಣಗಳು ದಾಖಲಾಗಿವೆ. ಮೂತ್ರಪಿಂಡವು ಎರಡನೇ ಸ್ಥಾನದಲ್ಲಿರುವುದರಿಂದ ಕಲ್ಲುಗಳ ರಚನೆಯ ಸಾಧ್ಯತೆಗಳಿವೆ. ಮೂತ್ರನಾಳದಲ್ಲಿ ಬ್ಲಾಕ್ ಆಗುವ ಸಂಭವವಿದ್ದು. ಪದೇ ಪದೆ ಸೋಂಕು ತಗಲುವ ಸಾಧ್ಯತೆಯೂ ಇದೆ ಎಂದು ತಿಳಿಸಿದರು.

ಇನ್ನು ಸೂಪರ್​ನ್ಯೂಮರರಿ ಕಿಡ್ನಿ ಕೆಲಸ ಮಾಡುತ್ತಿದೆಯೋ ಇಲ್ಲವೋ, ಕಲ್ಲುಗಳು ಅಥವಾ ಸೋಂಕು ಇದೆಯೇ ಎಂಬುದನ್ನು ಪತ್ತೆ ಹಚ್ಚಲು ಸಿಟಿ ಸ್ಕ್ಯಾನ್ ಮಾಡಿಸಬೇಕಿದೆ. ಒಂದು ವೇಳೆ ಕಲ್ಲುಗಳು ಇದ್ದರೆ, ಶಸ್ತ್ರಚಿಕಿತ್ಸೆ ಮಾಡಬೇಕಾಗಬಹುದು. ಸೋಂಕು ತಗುಲಿದರೆ, ವೈದ್ಯಕೀಯ ವರದಿ ನೋಡಿ ನಿರ್ಧಾರ ಮಾಡಬೇಕಾಗುತ್ತದೆ. ಇಮೇಜಿಂಗ್ ಸ್ಟಡಿ, ಸೋನೋಗ್ರಫಿ ಮತ್ತು ಸಿಟಿ ಸ್ಕ್ಯಾನ್ ಸೇರಿದಂತೆ ವಿವರವಾದ ತಪಾಸಣೆಗಳು ನಡೆಸಬೇಕು. ಈ ವರದಿಗಳ ಆಧಾರದ ಮೇಲೆ ಇತರ ಚಿಕಿತ್ಸೆ ನೀಡಬೇಕಾಗಿದೆ ಎಂದು ವಿವರಿಸಿದರು.

ಇದನ್ನೂ ಓದಿ:ಆ್ಯಂಟಿಬಯೋಟಿಕ್​ಗಳ ದುರ್ಬಳಕೆಯಿಂದ ಕಿಡ್ನಿಗೆ ಹಾನಿ; ಸಾರ್ವಜನಿಕರಲ್ಲಿ ಮೂಡಿಸಬೇಕಿದೆ ಅರಿವು

ABOUT THE AUTHOR

...view details