ಪ್ರಯಾಗ್ ರಾಜ್(ಉತ್ತರ ಪ್ರದೇಶ): ಗೋಮಾತೆಯನ್ನು ಗೌರವಿಸಲು 2025ರ ಕುಂಭಮೇಳದಲ್ಲಿ ಮಹಾಯಜ್ಞ ನಡೆಸಲು ನಿರ್ಧರಿಸಲಾಗಿದೆ. ಗೋವನ್ನು ರಾಷ್ಟ್ರಮಾತೆ ಎಂದು ಘೋಷಿಸುವಂತೆ ಈ ಸಂದರ್ಭದಲ್ಲಿ ಸರ್ಕಾರಕ್ಕೆ ಒತ್ತಾಯಿಸಲಾಗುವುದು. ದೇಶದಲ್ಲಿ ಗೋಹತ್ಯೆ ಪದ್ಧತಿಯನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿರುವ ಈ ಪವಿತ್ರ ಮಹಾಯಜ್ಞವು ಜ್ಯೋತಿಶ್ ಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರ ಶಿಬಿರದಲ್ಲಿ ನಡೆಯಲಿದೆ. ಇದು ಕುಂಭಮೇಳದ ಸ್ಥಳದಲ್ಲಿ ನಡೆಯಲಿರುವ ಅತಿದೊಡ್ಡ ಯಜ್ಞ ಶಿಬಿರವಾಗಿದ್ದು, 1100 ಪುರೋಹಿತರು ಇಡೀ ತಿಂಗಳು ಪ್ರತಿದಿನ ಯಜ್ಞಗಳನ್ನು ನಡೆಸಲಿದ್ದಾರೆ.
324 ಕುಂಡಗಳಲ್ಲಿ ಯಜ್ಞ ನಡೆಯಲಿದ್ದು, ಈ ಕುಂಡಗಳನ್ನು ಒಂಬತ್ತು ಶಿಖರಗಳ ರಚನೆಯಲ್ಲಿ ಜೋಡಿಸಲಾಗಿದೆ. ಇದು ಆಧ್ಯಾತ್ಮಿಕ ಉನ್ನತಿ ಮತ್ತು ಏಕತೆಯನ್ನು ಸಂಕೇತಿಸುತ್ತದೆ. ಪ್ರತಿ ಕುಂಡದಲ್ಲಿ ಮೂವರು ಪುರೋಹಿತರು ಯಜ್ಞಕಾರ್ಯ ನಡೆಸಲಿದ್ದಾರೆ. ಅಂದರೆ ಒಟ್ಟು 1100 ಪುರೋಹಿತರು ಪ್ರತಿದಿನ ಒಂಬತ್ತು ಗಂಟೆಗಳ ಕಾಲ ಆಚರಣೆಯಲ್ಲಿ ತೊಡಗಲಿದ್ದಾರೆ. ಗೋರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಹಸುವಿಗೆ ರಾಷ್ಟ್ರೀಯ ತಾಯಿಯ ಸ್ಥಾನಮಾನವನ್ನು ನೀಡುವಂತೆ ಒತ್ತಾಯಿಸುವುದು ಯಜ್ಞದ ಪ್ರಾಥಮಿಕ ಉದ್ದೇಶವಾಗಿದೆ.
ಈ ಯಜ್ಞದ ಉದ್ದೇಶವನ್ನು ವಿವರಿಸಿದ ಮುಕುಂದಾನಂದ ಬ್ರಹ್ಮಚಾರಿ, "ಭಗವಾನ್ ಶ್ರೀ ರಾಮ ಮತ್ತು ಭಗವಾನ್ ಕೃಷ್ಣ ನಮ್ಮ ಜೀವನದಲ್ಲಿ ಅತ್ಯುನ್ನತ ಪ್ರಾಮುಖ್ಯತೆಯನ್ನು ಹೊಂದಿದ್ದಾರೆ ಮತ್ತು ಅವರ ಜೀವನದಲ್ಲಿ, 'ಗೋ ಮಾತೆ' ಅತ್ಯಂತ ಮಹತ್ವದ್ದಾಗಿದೆ. ನಮ್ಮ ದೇಶದಲ್ಲಿ, ಹಸುಗಳನ್ನು ಕೊಲ್ಲಲಾಗುತ್ತಿದೆ. ಈ ಅಭ್ಯಾಸ ನಿಲ್ಲಬೇಕಿದೆ. ಗೋವಿಗೆ ಅತ್ಯುನ್ನತ ಗೌರವ ನೀಡಬೇಕು." ಎಂದರು.
"ಕಳೆದ ಒಂದು ತಿಂಗಳಿನಿಂದ ಯಜ್ಞದ ಸಿದ್ಧತೆಗಳು ನಡೆಯುತ್ತಿವೆ. ಯಜ್ಞ ಮಂಟಪವನ್ನು ನಿರ್ಮಿಸಲು ಪ್ರತಿದಿನ 50 ಸ್ವಯಂಸೇವಕರು ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ, ಕುಂಡಗಳ ನಿರ್ಮಾಣ ಕಾರ್ಯ ಶೇ 75ರಷ್ಟು ಪೂರ್ಣಗೊಂಡಿದೆ. ಶಿಬಿರದಲ್ಲಿ 35 ತಳಿಯ ದೇಶೀಯ ಹಸುಗಳನ್ನು ಇರಿಸಲಾಗುವುದು ಮತ್ತು ಅವುಗಳಿಗಾಗಿ ಗೋಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ದೇಶದ ವಿವಿಧ ಭಾಗಗಳಿಂದ ಈ ದೇಶೀಯ ಹಸುಗಳನ್ನು ಗೋರಕ್ಷಕರು ಇಲ್ಲಿಗೆ ತರುತ್ತಿದ್ದಾರೆ" ಎಂದು ಅವರು ಹೇಳಿದರು.
ಏತನ್ಮಧ್ಯೆ, ಮಹಾ ಕುಂಭ ಮೇಳಕ್ಕೆ ಒಂದು ವಾರ ಮಾತ್ರ ಬಾಕಿ ಇದ್ದು, ಭಾರತ ಮತ್ತು ಪ್ರಪಂಚದಾದ್ಯಂತದ ಸಾಧುಗಳು ಮತ್ತು ಸಾವಿರಾರು ಭಕ್ತರು ಪ್ರಯಾಗ್ ರಾಜ್ಗೆ ಬರಲು ಆರಂಭಿಸಿದ್ದಾರೆ. ಈ ಭವ್ಯ ಆಧ್ಯಾತ್ಮಿಕ ಸಮಾವೇಶದಲ್ಲಿ ನಾಗಾ ಸಾಧುಗಳು ತಮ್ಮ ವಿಶೇಷ ಉಡುಗೆ ಮತ್ತು ಹಠ ಯೋಗದಿಂದ ಜನರನ್ನು ಆಕರ್ಷಿಸುತ್ತಿದ್ದಾರೆ. ನಾಗಾ ಸಾಧು ಪ್ರಮೋದ್ ಗಿರಿ ಮಹಾರಾಜ್ ಅವರು ಈ ಬಾರಿಯ ಮಹಾಕುಂಭ ಮೇಳದಲ್ಲಿ ಜನತೆಯ ಗಮನ ಸೆಳೆದಿದ್ದಾರೆ. ಇವರು ಪ್ರತಿದಿನ ಮುಂಜಾನೆ 4 ಗಂಟೆಗೆ ವಿಶಿಷ್ಟ ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳುತ್ತಾರೆ ಮತ್ತು ಕೊರೆಯುವ ಚಳಿಯ ಹೊರತಾಗಿಯೂ 61 ಮಡಕೆ ತಣ್ಣೀರಿನಿಂದ ಸ್ನಾನ ಮಾಡುತ್ತಾರೆ.