ಪಾಟ್ನಾ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಾಲ್ಗೊಂಡಿದ್ದ ವೇದಿಕೆ ಹಠಾತ್ತನೆ ಕುಸಿದ ಘಟನೆ ಬಿಹಾರದ ಪಾಟಲಿಪುತ್ರದಲ್ಲಿ ನಡೆದಿದೆ. ಘಟನೆ ಕೆಲಕಾಲ ಗೊಂದಲ ಸೃಷ್ಟಿಸಿತ್ತು.
ಪಾಟಲಿಪುತ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರ ಪುತ್ರಿ ಮಿಸಾ ಭಾರತಿ ಪರ ಮತಯಾಚನೆ ಮಾಡಲು ರಾಹುಲ್ ಗಾಂಧಿ ಪಟ್ನಾಕ್ಕೆ ಬಂದಿದ್ದರು. ಪಾಲಿಗಂಜ್ ಪ್ರದೇಶದಲ್ಲಿ ಆಯೋಜಿಸಿದ್ದ ಚುನಾವಣಾ ಸಮಾವೇಶದಲ್ಲಿ ಅವರು ಭಾಗವಹಿಸಿದ್ದರು. ಚುನಾವಣಾ ಪ್ರಚಾರಕ್ಕಾಗಿ ಸಿದ್ಧಪಡಿಸಲಾಗಿದ್ದ ವೇದಿಗೆ ಏರಿ ಮತದಾರರತ್ತ ಕೈ ಬೀಸುತ್ತಾ ರಾಹುಲ್ ಗಾಂಧಿ ಮಧ್ಯಭಾಗದಲ್ಲಿ ಬರುತ್ತಿದ್ದಂತೆ ವೇದಿಕೆಯ ಒಂದು ಭಾಗ ಏಕಾಏಕಿ ಕುಸಿದಿದೆ. ಪಕ್ಕದಲ್ಲಿದ್ದ ಮಿಸಾ ಭಾರತಿ ಅವರು ತಕ್ಷಣ ರಾಹುಲ್ ಅವರ ಕೈ ಹಿಡಿದು ರಕ್ಷಣೆಗೆ ಯತ್ನಿಸಿದ್ದಾರೆ. ಭದ್ರತಾ ಸಿಬ್ಬಂದಿ ಕೂಡ ರಾಹುಲ್ ನೆರವಿಗೆ ಧಾವಿಸುತ್ತಿದ್ದಾರೆ. ಈ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಒಂದಲ್ಲ ಹಲವಾರು ಬಾರಿ ವೇದಿಕೆ ಏಕಾಏಕಿ ಕುಸಿದಿದ್ದರಿಂದ ಸ್ವಲ್ಪ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಅದೇ ವೇದಿಕೆಯ ಸಮತಟ್ಟಾದ ಜಾಗದಲ್ಲಿ ನಿಂತು ಅಭ್ಯರ್ಥಿ ಪರ ಮತ ಯಾಚಿಸಿದರು.
ಸಭೆ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಮಹಾಲಕ್ಷ್ಮಿ ಯೋಜನೆಯಡಿ ಬಡ ಕುಟುಂಬದ ಮಹಿಳೆಯರಿಗೆ ವಾರ್ಷಿಕ ₹ 1 ಲಕ್ಷ ಸಿಗಲಿದೆ. ಪ್ರತಿಯೊಬ್ಬ ವಿದ್ಯಾವಂತ ಯುವಕನ ಮೊದಲ ಉದ್ಯೋಗ ಕಾಯಂ ಆಗಲಿದ್ದು, ಅದರಲ್ಲಿ ವಾರ್ಷಿಕ ₹1 ಲಕ್ಷ ಸಿಗಲಿದೆ. ರೈತರಿಗೆ ಎಂಎಸ್‌ಪಿಯ ಕಾನೂನುಬದ್ಧ ಗ್ಯಾರಂಟಿ ಸಿಗುತ್ತದೆ. ಅಲ್ಲದೇ ಅವರ ಸಾಲವನ್ನು ಮನ್ನಾ ಕೂಡ ಮಾಡಲಾಗುತ್ತದೆ ಈ ಹಿಂದೆ ಘೋಷಿಸಲಾಗಿದ್ದ ಪ್ರಣಾಳಿಕೆಯನ್ನು ಮತ್ತೆ ಪುನರುಚ್ಚರಿಸಿದರು.