ಕರ್ನಾಟಕ

karnataka

ETV Bharat / bharat

13 ಮೀನುಗಾರರ ಬಂಧಿಸಿದ ಶ್ರೀಲಂಕಾ: ವಿದೇಶಾಂಗ ಸಚಿವ ಜೈಶಂಕರ್​ಗೆ ಸಿಎಂ ಸ್ಟಾಲಿನ್ ಪತ್ರ - Tamil Nadu Fishermen arrested - TAMIL NADU FISHERMEN ARRESTED

ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ 13 ಮೀನುಗಾರರನ್ನು ಶ್ರೀಲಂಕಾ ಬಂಧಿಸಿದೆ. ಈ ಕುರಿತು ಕೇಂದ್ರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಸಿಎಂ ಎಂ.ಕೆ.ಸ್ಟಾಲಿನ್ ಪತ್ರ ಬರೆದಿದ್ದಾರೆ.

13 ಮೀನುಗಾರರ ಬಂಧಿಸಿದ ಶ್ರೀಲಂಕಾ: ವಿದೇಶಾಂಗ ಸಚಿವ ಜೈಶಂಕರ್​ಗೆ ಸಿಎಂ ಸ್ಟಾಲಿನ್ ಪತ್ರ
13 ಮೀನುಗಾರರ ಬಂಧಿಸಿದ ಶ್ರೀಲಂಕಾ: ವಿದೇಶಾಂಗ ಸಚಿವ ಜೈಶಂಕರ್​ಗೆ ಸಿಎಂ ಸ್ಟಾಲಿನ್ ಪತ್ರ (ETV Bharat)

By ETV Bharat Karnataka Team

Published : Jul 11, 2024, 9:40 PM IST

ಚೆನ್ನೈ (ತಮಿಳುನಾಡು):ತಮಿಳುನಾಡಿನ 13 ಜನ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ. ಅಲ್ಲದೇ, ಮೂರು ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಕೇಂದ್ರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಪತ್ರ ಬರೆದು ರಾಜತಾಂತ್ರಿಕ ಮಾರ್ಗದ ಮೂಲಕ ಮೀನುಗಾರರನ್ನು ತಕ್ಷಣವೇ ಬಿಡುಗಡೆಗೆ ಕ್ರಮ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ಪುದುಕೊಟ್ಟೈ ಜಿಲ್ಲೆಯ ನೆಡುಂಡಿವು ಬಳಿ ಗಡಿಯಾಚೆ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ 13 ಮೀನುಗಾರರನ್ನು ಬಂಧಿಸಿರುವ ಶ್ರೀಲಂಕಾದ ಗೃಹರಕ್ಷಕ ದಳದವರು, ಬಂಧಿತ ಮೀನುಗಾರರನ್ನು ನೌಕಾ ಶಿಬಿರಕ್ಕೆ ಕರೆದೊಯ್ದಿದ್ದಾರೆ. ಮೀನುಗಾರರ ಬಂಧನಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಸಚಿವರಿಗೆ ಸಿಎಂ ಪತ್ರ ಬರೆದಿದ್ದಾರೆ. ತಮಿಳುನಾಡಿನ 13 ಮೀನುಗಾರರು ಹಾಗೂ ಅವರ ಮೀನುಗಾರಿಕೆ ದೋಣಿಗಳೊಂದಿಗೆ ಶ್ರೀಲಂಕಾ ಅಧಿಕಾರಿಗಳು ಬಂಧಿಸಿರುವ ಬಗ್ಗೆ ನಿಮ್ಮ ಗಮನ ಸೆಳೆಯಲು ನಾನು ಬಯಸುತ್ತೇನೆ. ಸಮುದ್ರವನ್ನೇ ನಂಬಿ ಬದುಕುತ್ತಿರುವ ನಮ್ಮ ಮೀನುಗಾರರು ಹಿಂದೆಂದೂ ಕಂಡರಿಯದ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಶ್ರೀಲಂಕಾದ ವಶದಲ್ಲಿ 80 ಮೀನುಗಾರರು - ಸಿಎಂ ಸ್ಟಾಲಿನ್:ಪ್ರಸ್ತುತ 173 ಮೀನುಗಾರಿಕಾ ದೋಣಿಗಳು ಮತ್ತು 80 ಮೀನುಗಾರರು ಶ್ರೀಲಂಕಾದ ವಶದಲ್ಲಿದ್ದಾರೆ. ಇದು ಮೀನುಗಾರರ ಜೀವನೋಪಾಯದ ಮೇಲೆ ತೀವ್ರ ಪರಿಣಾಮ ಬೀರಿದೆ ಮತ್ತು ಅವರ ಕುಟುಂಬಗಳಿಗೆ ಅಪಾರವಾದ ಸಂಕಟವನ್ನು ತಂದೊಡ್ಡಿದೆ. ಹೀಗಾಗಿ, ಈ ವಿಷಯವನ್ನು ತುರ್ತಾಗಿ ಪರಿಹರಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಬಲವಾದ ಮತ್ತು ಸಂಘಟಿತ ಪ್ರಯತ್ನಗಳನ್ನು ಮಾಡಬೇಕೆಂದು ನಾನು ವಿನಂತಿಸುತ್ತೇನೆ ಎಂದು ಸ್ಟಾಲಿನ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮುಂದುವರೆದು, ಎಲ್ಲ ಮೀನುಗಾರರನ್ನು ಮತ್ತು ಅವರ ಮೀನುಗಾರಿಕಾ ದೋಣಿಗಳನ್ನು ತಕ್ಷಣವೇ ಬಿಡುಗಡೆ ಮಾಡಲು ಸೂಕ್ತ ರಾಜತಾಂತ್ರಿಕ ಮಾರ್ಗಗಳನ್ನು ಸಕ್ರಿಯಗೊಳಿಸಬೇಕೆಂದು ನಾನು ಮನವಿ ಮಾಡುತ್ತೇನೆ ಎಂದು ಪತ್ರದಲ್ಲಿ ಒತ್ತಿ ಹೇಳಿದ್ದಾರೆ. ಅದೇ ರೀತಿ ಜೂನ್ 30ರಂದು ರಾಮೇಶ್ವರಂ ಬಳಿ ಗಡಿ ದಾಟಿ ಮೀನುಗಾರಿಕೆ ನಡೆಸಿದ್ದಕ್ಕಾಗಿ 25 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿತ್ತು. ಈ ಪೈಕಿ 22 ಮೀನುಗಾರರನ್ನು ಬಿಡುಗಡೆ ಮಾಡಲಾಗಿತ್ತು.

ಇದಕ್ಕೂ ಮುನ್ನ ಜೂನ್ 22ರಂದು ಕಚ್ಚತೀವು ಬಳಿ ಮೀನುಗಾರಿಕೆ ನಡೆಸುತ್ತಿದ್ದ 18 ಮೀನುಗಾರರನ್ನೂ ಶ್ರೀಲಂಕಾ ಬಂಧಿಸಿದೆ. ಇದೀಗ ಪುದುಕೊಟ್ಟೈ ಜಿಲ್ಲೆಯಲ್ಲಿ 13 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ. ಇದು ತಮಿಳುನಾಡಿನ ಮೀನುಗಾರರಲ್ಲಿ ತೀವ್ರ ಉದ್ವಿಗ್ನತೆಯನ್ನು ಉಂಟುಮಾಡಿದೆ.

ಇದನ್ನೂ ಓದಿ:ತಮಿಳುನಾಡು ಮೀನುಗಾರರ ಮೇಲೆ ಶ್ರೀಲಂಕಾ ಕಡಲ್ಗಳ್ಳರ ದಾಳಿ: ವಾಕಿ ಟಾಕಿ, ಜಿಪಿಎಸ್​ ದೋಚಿ ಪರಾರಿ

ABOUT THE AUTHOR

...view details