ತಿರುವನಂತಪುರಂ(ಕೇರಳ):ಇಲ್ಲಿನ ಕನ್ನಮ್ಮೂಲ ಮತ್ತು ವೈದ್ಯಕೀಯ ಕಾಲೇಜು ನಡುವೆ ಸಂಚರಿಸಿದ ಕೆಎಸ್‌ಆರ್‌ಟಿಸಿ ಸ್ವಿಫ್ಟ್ ಬಸ್ನಲ್ಲಿ ಪ್ರಯಾಣಿಸಿದ ಪ್ರಯಾಣಿಕರು ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು. ಹೌದು, ಇತ್ತೀಚಿಗೆ ಕೆಎಸ್‌ಆರ್‌ಟಿಸಿ ಸ್ವಿಫ್ಟ್ ಬಸ್ಗೆ ಡ್ರೈವರ್ ಆಗಿ ನೇಮಕಗೊಂಡಿರುವ ಶ್ರೀರಾಗ್ ಆರ್.ವೈ ಎಂಬುವವರು, ಕಂಡಕ್ಟರ್ ಆಗಿರುವ ತನ್ನ ತಾಯಿ ಯಮುನಾ ಆರ್ ಅವರ ಜೊತೆ ಮೊದಲನೇ ದಿನ ಕರ್ತವ್ಯ ನಿರ್ವಹಿಸಿ ಎಲ್ಲರ ಗಮನ ಸೆಳೆದರು. ಡ್ರೈವರ್ ಮಗನೊಂದಿಗೆ ಕಂಡಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ ತಾಯಿ ಸಂತಸಪಟ್ಟರು.
ಯಮುನಾ ಅವರು 2009 ರಿಂದ ಕೆಎಸ್‌ಆರ್‌ಟಿಸಿ (ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2022 ಕೆಎಸ್‌ಆರ್‌ಟಿಸಿಯು ಹೊಸದಾಗಿ ಕೆ - ಸ್ವಿಫ್ಟ್ ಬಸ್ ಸೇವೆ ಪ್ರಾರಂಭಿಸಿತು. ಇದಕ್ಕೆ ಮೊದಲ ಮಹಿಳಾ ಕಂಡಕ್ಟರ್ ಆಗಿ ಯಮುನಾ ನಿಯೋಜನೆಗೊಂಡರು. ತನ್ನ ಮಗ ಶ್ರೀರಾಗ್ ಡ್ರೈವರ್ ಆಗಬೇಕು ಎಂದು ಯಮುನಾ ಕನಸು ಕಂಡಿದ್ದರು. ನಾಲ್ಕು ತಿಂಗಳ ಹಿಂದೆ ಯಮುನಾ ಕೆಎಸ್‌ಆರ್‌ಟಿಸಿಯಲ್ಲಿ ಡ್ರೈವರ್ ಹುದ್ದೆ ಖಾಲಿ ಇರುವ ಬಗ್ಗೆ ತಿಳಿದುಕೊಂಡು ಡ್ರೈವರ್ ಹುದ್ದೆಗೆ ಅರ್ಜಿ ಸಲ್ಲಿಸುವಂತೆ ಮಗನಿಗೆ ತಿಳಿಸಿದ್ದರು.
ಯಮುನಾ ಮಾತನಾಡಿ, "ನನ್ನ ಮಗನಿಗೆ ಬಾಲ್ಯದಿಂದಲೂ ಡ್ರೈವಿಂಗ್ ಬಗ್ಗೆ ಹೆಚ್ಚು ಒಲವಿತ್ತು. ಅರಣ್ಯ ಇಲಾಖೆಯಲ್ಲಿ ತಾತ್ಕಾಲಿಕ ಚಾಲಕನಾಗಿದ್ದ ಶ್ರೀರಾಗ್ ಲೈಸೆನ್ಸ್ ಹೊಂದಿದ್ದ. ಕೆಲ ತಿಂಗಳ ಹಿಂದೆ ಡ್ರೈವರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ. ಇತ್ತೀಚಿಗೆ ಕೆ - ಸ್ವಿಫ್ಟ್ ಬಸ್ ಚಾಲಕನನ್ನಾಗಿ ಶ್ರೀರಾಗ್ ನೇಮಕಗೊಂಡಿದ್ದಾನೆ. ತನ್ನ ತಾಯಿಯೊಂದಿಗೆ ಮೊದಲ ದಿನ ಕರ್ತವ್ಯ ನಿರ್ವಹಿಸಬೇಕೆಂಬ ಶ್ರೀರಾಗ್‌ನ ಆಸೆಯನ್ನು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಈಡೇರಿಸಿದ್ದಾರೆ" ಎಂದು ಸಂತಸಪಟ್ಟರು.