ಹೈದರಾಬಾದ್: ಖಾಸಗಿ ಬಾಹ್ಯಾಕಾಶ ಸಂಸ್ಥೆಯಾಗಿರುವ ಸ್ಕೈರೂಟ್ ಏರೋಸ್ಪೇಸ್ ಕಲಾಂ 250 ಎಂದು ಕರೆಯಲ್ಪಡುವ ವಿಕ್ರಂ-1 ರಾಕೆಟ್ನ ಎರಡನೇ ಹಂತದ ಪರೀಕ್ಷಾರ್ಥ ಪ್ರಯೋಗವನ್ನು ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಯಶಸ್ವಿಯಾಗಿ ನಡೆಸಿದೆ.
ಶ್ರೀಹರಿಕೋಟದಲ್ಲಿ 85 ಸೆಕೆಂಡ್ನ ಪರೀಕ್ಷೆಯನ್ನು ನಡೆಸಲಾಗಿದ್ದು, ಈ ವೇಳೆ 186 ಕಿಲೋನ್ಯೂಟನ್‌ಗಳ ಗರಿಷ್ಠ ಸಮುದ್ರ ಮಟ್ಟದ ಒತ್ತಡವನ್ನು ದಾಖಲಿಸಿತು. ಇದು ಹಾರಾಟದ ಸಮಯದಲ್ಲಿ ಸುಮಾರು 235ಕೆಎನ್ ನಷ್ಟು ಸಂಪೂರ್ಣ ವಿಸ್ತರಿತ ನಿರ್ವಾತ ಒತ್ತಡಕ್ಕೆ ಕಾರಣವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ವಿಕ್ರಂ 1 ಉಡಾವಣೆಯು ಭಾರತೀಯ ಬಾಹ್ಯಾಕಾಶ ವಲಯದಲ್ಲಿ ಒಂದು ಮೈಲಿಗಲ್ಲು ಆಗಿದೆ. ಕಾರಣ ಇದೇ ಮೊದಲ ಬಾರಿಗೆ ಖಾಸಗಿ ಸಂಸ್ಥೆಯೊಂದು ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ರಾಕೆಟ್ವೊಂದು ಉಡಾವಣೆ ನಡೆಸಲು ಸಜ್ಜಾಗಿದೆ. 2022ರಲ್ಲೂ ಕೂಡ ಸ್ಕೈರೂಟ್ ವಿಕ್ರಂ -ಎಸ್ ಅನ್ನು ಉಪ ಕಕ್ಷೆಗೆ ಸಾಗಿಸುವ ರಾಕೆಟ್ ಉಡಾವಣೆ ಮಾಡಿದ ಮೊದಲ ಭಾರತೀಯ ಖಾಸಗಿ ಸಂಸ್ಥೆ ಆಗಿದೆ.
ಕಲಾಂ 250 ಹೆಚ್ಚು ಬಲವಾದ ಇಂಗಾಲದ ಸಂಯೋಜನೆಯ ರಾಕೆಟ್ ಮೋಟಾರ್ ಹೊಂದಿದ್ದು, ಇದು ಘನ ಇಂಧನವನ್ನು ಬಳಕೆ ಮಾಡಿದೆ. ಹೆಚ್ಚು ಸಾಮರ್ಥ್ಯದಾಯಕ ಎಥಿಲಿನ್ಪ್ರೊ - ಪಿಲೀನ್- ಡೈನ್ ಟೆರ್ಪಾಲಿಮರ್ಸ್ (ಇಪಿಡಿಎಂ) ಥರ್ಮಲ್ ಪ್ರೊಟೆಕ್ಷನ್ ಸಿಸ್ಟಮ್ (ಟಿಪಿಎಸ್) ಹೊಂದಿದೆ.