ನವದೆಹಲಿ: ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮೃತದೇಹವನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಗೆ ಅವರ ಕುಟುಂಬ ದಾನ ಮಾಡಿದೆ.
ಬೋಧನೆ ಮತ್ತು ಸಂಶೋಧನೆ ಉದ್ದೇಶದಿಂದ ಯೆಚೂರಿ ದೇಹವನ್ನು ಅವರ ಕುಟುಂಬಸ್ಥರು ದಾನ ಮಾಡಿದ್ದಾರೆ ಎಂದು ಏಮ್ಸ್ ಪ್ರಕಟಣೆಯಲ್ಲಿ ತಿಳಿಸಿದೆ. 72 ವರ್ಷದ ಸೀತಾರಾಮ್ ಯೆಚೂರಿಯವರು ಆಗಸ್ಟ್ 19, 2024ರಂದು ನ್ಯೂಮೋನಿಯಾ ಸಮಸ್ಯೆಯಿಂದ ದೆಹಲಿಯ ಏಮ್ಸ್ಗೆ ದಾಖಲಾಗಿದ್ದರು. ಅವರು ಸೆಪ್ಟೆಂಬರ್ 12ರ ಮಧ್ಯಾಹ್ನ 3.05ಕ್ಕೆ ಇಹಲೋಹ ತ್ಯಜಿಸಿದ್ದರು. ಕುಟುಂಬಸ್ಥರು ವೈದ್ಯಕೀಯ ವಿದ್ಯಾರ್ಥಿಗಳ ಕಲಿಕೆ ಮತ್ತು ಸಂಶೋಧನೆ ಉದ್ದೇಶದಿಂದ ದೇಹದಾನ ಮಾಡಿದ್ದಾರೆ.
ಯೆಚೂರಿ ಸಾವಿನ ಹಿನ್ನೆಲೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅಂತಿಮ ನಮನವನ್ನು ಸಲ್ಲಿಸಿದ್ದರು. ಮಾಜಿ ರಾಜ್ಯಸಭಾ ಸದಸ್ಯರಾಗಿದ್ದ ಯೆಚೂರಿ ಅವರಿಗೆ ಅನೇಕ ರಾಜಕೀಯ ಗಣ್ಯರು ಅಂತಿಮ ನಮನ ಸಲ್ಲಿಸಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಿಪಕ್ಷ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಜೈರಾಮ್ ರಮೇಶ್, ಪಶ್ಚಿಮ ಬಂಗಾಳ ಸಿಂ ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕರು ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದರು.