ಸಿಲಿಗುರಿ (ಸಿಕ್ಕಿಂ):ಈಶಾನ್ಯ ರಾಜ್ಯಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಸ್ತೆಗಳು, ವಿಮಾನ, ರೈಲು ಸಂಚಾರಕ್ಕೆ ಅಡ್ಡಿಯಾಗಿದೆ. ಸಿಕ್ಕಿಂಗೆ ಸಂಪರ್ಕ ಕಲ್ಪಿಸುವ, ರಾಜ್ಯದ ಜೀವನಾಡಿಯಾಗಿರುವ ರಾಷ್ಟ್ರೀಯ ಹೆದ್ದಾರಿ 10 ಅನ್ನು ಬಂದ್ ಮಾಡಿರುವುದು ರಾಜ್ಯದ ಆದಾಯಕ್ಕೆ ಭಾರೀ ಹೊಡೆತ ನೀಡಿದೆ.
ತೀವ್ರ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಹೀಗಾಗಿ ಕಳೆದ 10 ದಿನಗಳಿಂದ ರಸ್ತೆಯನ್ನು ಮುಚ್ಚಲಾಗಿದೆ. ಇದು ಸಿಕ್ಕಿಂ ಸರ್ಕಾರದ ಬೊಕ್ಕಸಕ್ಕೆ ನಷ್ಟ ತಂದಿದೆ. ದಿನಕ್ಕೆ 100 ಕೋಟಿ ರೂಪಾಯಿ ಆದಾಯ ಖೋತಾ ಆಗುತ್ತಿದೆ ಎಂದು ಅಲ್ಲಿನ ಸಿಎಂ ತಿಳಿಸಿದ್ದಾರೆ.
ರಾಜ್ಯದ ಆದಾಯಕ್ಕೆ ಪೆಟ್ಟು:ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದಕ್ಕೆ ಕಳವಳ ವ್ಯಕ್ತಪಡಿಸಿದ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್, ರಾಜ್ಯದ ಜೀವನಾಡಿ ಆಗಿರುವ ರಾಷ್ಟ್ರೀಯ ಹೆದ್ದಾರಿ 10 ರ ಮುಚ್ಚುವಿಕೆಯಿಂದಾಗಿ ಸರ್ಕಾರವು ನಿತ್ಯ ಸುಮಾರು 100 ಕೋಟಿ ರೂಪಾಯಿ ಆದಾಯ ಕಳೆದುಕೊಳ್ಳುತ್ತಿದೆ. ಹೆದ್ದಾರಿಯು ಸಿಲಿಗುರಿಯಿಂದ ಕಾಲಿಂಪಾಂಗ್, ಡಾರ್ಜಿಲಿಂಗ್ ಮತ್ತು ಸಿಕ್ಕಿಂಗೆ ಸಂಪರ್ಕಿಸುವ ಮುಖ್ಯ ಕೊಂಡಿಯಾಗಿದೆ. ಆದರೆ, ಹಲವೆಡೆ ರಸ್ತೆ ಕುಸಿತವಾಗಿ ಕಳೆದ 10 ದಿನಗಳಿಂದ ಹೆದ್ದಾರಿ ಬಂದ್ ಆಗಿದೆ. ಸದ್ಯಕ್ಕೆ ಎಲ್ಲ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಆದಾಯ ನಷ್ಟವಾಗುತ್ತಿದೆ ಎಂದಿದ್ದಾರೆ.
ಪರ್ಯಾಯ ಮಾರ್ಗ ಆರಂಭಿಸಿದ್ದರೂ, ಆ ಮಾರ್ಗದಲ್ಲಿ ದೊಡ್ಡ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಪರಿಸ್ಥಿತಿಯು ಹೆಚ್ಚು ಆತಂಕಕಾರಿಯಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಿರುವುದರಿಂದ, ಕಾಲಿಂಪಾಂಗ್ ಜಿಲ್ಲೆಯ ಕಡೆಗೆ ಭಾರೀ ವಾಹನ ದಟ್ಟಣೆ ಉಂಟಾಗುತ್ತಿದೆ. ಹೆದ್ದಾರಿಯ ಉದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿವೆ ಎಂದಿದ್ದಾರೆ.