ಲಖನೌ, ಉತ್ತರಪ್ರದೇಶ: ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ ತಮ್ಮ ಗುರುತನ್ನು ಬದಲಾಯಿಸುವ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಈಗ ಅವರ ಹೆಸರು 'ಠಾಕೂರ್ ಜಿತೇಂದ್ರ ನಾರಾಯಣ ಸಿಂಗ್ ಸೆಂಗಾರ್' ಆಗಿ ಬದಲಾಗಿದೆ. ಸನಾತನ ಧರ್ಮವನ್ನು ಅಳವಡಿಸಿಕೊಂಡ ನಂತರ, ರಿಜ್ವಿ 2021 ರಲ್ಲಿ ತಮ್ಮ ಹೆಸರನ್ನು 'ಜಿತೇಂದ್ರ ನಾರಾಯಣ ಸಿಂಗ್ ತ್ಯಾಗಿ' ಎಂದು ಬದಲಾಯಿಸಿಕೊಂಡಿದ್ದರು. ಈಗ ಅವರು 'ಸೆಂಗರ್' ಎಂಬ ಉಪನಾಮವನ್ನು ಅಳವಡಿಸಿಕೊಂಡಿದ್ದಾರೆ.
ಶ್ರೀಪಂಚ್ ದಶನಂ ಜುನಾ ಅಖಾರದ ಮಹಾಮಂಡಲೇಶ್ವರ ಮತ್ತು ದಾಸ್ನಾ ದೇವಿ ದೇವಸ್ಥಾನದ ಪ್ರಧಾನ ಅರ್ಚಕ ಯತಿ ನರಸಿಂಹಾನಂದರ ನೇತೃತ್ವದಲ್ಲಿ ನಡೆದ ದೀಕ್ಷಾ ಸಮಾರಂಭದಲ್ಲಿ ವಾಸಿಂ ರಿಜ್ವಿ ಅವರು 'ಜಿತೇಂದ್ರ ನಾರಾಯಣ ಸಿಂಗ್ ತ್ಯಾಗಿ‘ ಆಗಿ ಸನಾತನ ಧರ್ಮ ಸ್ವೀಕಾರ ಮಾಡಿದ್ದರು. ಹಿಂದೂ ಧರ್ಮಕ್ಕೆ ಮತಾಂತರಗೊಂಡ ಬಳಿಕ ಅಂದರೆ ಸುಮಾರು 3 ವರ್ಷಗಳ ನಂತರ ಅವರು ಈ ಮೊದಲಿನ ತಮ್ಮ ಹಿಂದೂ ಹೆಸರಿನೊಂದಿಗೆ ಠಾಕೂರ್ ಜಿತೇಂದ್ರ ನಾರಾಯಣ ಸಿಂಗ್ ಸೆಂಗಾರ್ ಎಂಬ ಉಪ ನಾಮ ಸೇರ್ಪಡೆ ಮಾಡಿಕೊಂಡಿದ್ದಾರೆ.
ಜಿತೇಂದ್ರ ಅವರು 2 ವರ್ಷಗಳ ಹಿಂದೆ ಯತಿ ನರಸಿಂಹಾನಂದ ಅವರೊಂದಿಗೆ ಭಿನ್ನಾಭಿಪ್ರಾಯದಿಂದ ಸಂಬಂಧ ಮುರಿದುಕೊಂಡಿದ್ದಾರೆ. ಅಷ್ಟೇ ಅಲ್ಲ ಅವರಿಂದ ಕೆಲ ವಿಚಾರಗಳಿಂದ ಅಂತರ ಕಾಪಾಡಿಕೊಂಡಿದ್ದಾರೆ.
ಸೆಂಗಾರ್ ಹೆಸರು ಬಂದಿದ್ದು ಹೇಗೆ? : ವಾಸಿಂ ರಿಜ್ವಿ ಅಲಿಯಾಸ್ ಜಿತೇಂದ್ರ ನಾರಾಯಣ ಸಿಂಗ್ ಸೆಂಗಾರ್ ಅವರು ಕಾಂಗ್ರಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರಭಾತ್ ಸಿಂಗ್ ಸೆಂಗಾರ್ ಅವರೊಂದಿಗೆ ಹಳೆಯ ಸ್ನೇಹವನ್ನು ಹೊಂದಿದ್ದಾರೆ. ಜಿತೇಂದ್ರ ಅವರನ್ನು ತಮ್ಮ ಕುಟುಂಬಕ್ಕೆ ಸೇರಿಸಿಕೊಳ್ಳಲು ಪ್ರಸ್ತಾಪಿಸಿದ್ದರು, ಅದನ್ನು ಸೆಂಗಾರ್ ಒಪ್ಪಿಕೊಂಡಿದ್ದಾರೆ. ಪ್ರಭಾತ್ ಸೆಂಗಾರ್ ಅವರ ತಾಯಿ ಯಶವಂತ್ ಕುಮಾರಿ ಸೆಂಗಾರ್, ಜಿತೇಂದ್ರ ಅವರನ್ನು ಕಾನೂನು ಅಫಿಡವಿಟ್ ಮೂಲಕ ತನ್ನ ಮಗನಾಗಿ ದತ್ತು ಪಡೆದಿದ್ದಾರೆ, ಇದರಿಂದಾಗಿ ಅವರು ಈ ಉಪನಾಮವನ್ನು ಇಟ್ಟುಕೊಳ್ಳಲು ಸಾಧ್ಯವಾಗಿದೆ. ಆದರೆ, ಆಸ್ತಿಯ ಮೇಲೆ ಅವರಿಗೆ ಯಾವುದೇ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.