ಪುಣೆ (ಮಹಾರಾಷ್ಟ್ರ):ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ 'ದೇಶದ ಭ್ರಷ್ಟಾಚಾರದ ನಾಯಕ', ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ 'ಔರಂಗಜೇಬ್ ಅಭಿಮಾನಿಗಳ ಸಂಘದ ಮುಖ್ಯಸ್ಥ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಟುವಾಗಿ ಟೀಕೆ ಮಾಡಿದ್ದಾರೆ.
ಇಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿಯೇ ಶರದ್ ಪವಾರ್ ಅವರು ಭ್ರಷ್ಟಾಚಾರದ ಅತಿದೊಡ್ಡ ನಾಯಕರು, ಮಾಸ್ಟರ್ಮೈಂಡ್ ಆಗಿದ್ದಾರೆ. ಉದ್ಧವ್ ಠಾಕ್ರೆ ಅವರು, ಮುಂಬೈ ಸ್ಫೋಟ ಪ್ರಕರಣದ ಆರೋಪಿಗಳನ್ನು ಬೆಂಬಲಿಸುವ ಮೂಲಕ ಔರಂಗಜೇಬ್ ಅಭಿಮಾನಿಗಳ ಸಂಘದ ಅಧ್ಯಕ್ಷರಾಗಿ ಗುರುತಿಸಿಸಿಕೊಂಡಿದ್ದಾರೆ ಎಂದು ಆರೋಪಿಸುವ ಮೂಲಕ INDIA ಕೂಟದ ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತನ್ನಿ:ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಂಬೈಗೆ ಆಗಮಿಸಿರುವ ಕೇಂದ್ರ ಸಚಿವರು, ಹಿಂದಿನ ಚುನಾವಣೆಯಲ್ಲಿ ಪಕ್ಷವು ಸ್ವಂತವಾಗಿ ಬಹುಮತವನ್ನು ಪಡೆಯಲು ಸಾಧ್ಯವಾಗದ ಕಾರಣ ನಿರಾಶೆಗೊಳ್ಳಬೇಡಿ ಎಂದು ಬಿಜೆಪಿ ಕಾರ್ಯಕರ್ತರನ್ನು ಕೇಳಿಕೊಂಡರು. ಮುಂಬರುವ ಚುನಾವಣೆಯಲ್ಲಿ ದೊಡ್ಡ ಗೆಲುವು ಸಾಧಿಸುವ ಮೂಲಕ ಅಧಿಕಾರಕ್ಕೇರೋಣ ಎಂದು ಹುರಿದುಂಬಿಸಿದರು.
ಪ್ರತಿಪಕ್ಷಗಳ ಸುಳ್ಳು ಭರವಸೆಗಳಿಂದ ಗೊಂದಲಕ್ಕೀಡಾಗಬೇಡಿ. ದಾರಿ ತಪ್ಪಬೇಡಿ. ಬಿಜೆಪಿ ಗೆಲುವಿಗಾಗಿ ಮಾತ್ರವಲ್ಲದೆ, ಮಹಾಯುತಿ ಸರ್ಕಾರ (ಬಿಜೆಪಿ-ಶಿವಸೇನೆ-ಎನ್‌ಸಿಪಿ) ಮತ್ತೊಮ್ಮೆ ಅಧಿಕಾರಕ್ಕೆ ಬರಲು ಒಗ್ಗಟ್ಟಿನಿಂದ ಕೆಲಸ ಮಾಡಿ ಎಂದು ಗೃಹ ಸಚಿವರು ಕರೆ ನೀಡಿದರು.
ವಿಕಾಸ್ ಅಘಾಡಿಯಿಂದ ಮರಾಠ ಮೀಸಲು ರದ್ದು:ಮೋದಿ ನೇತೃತ್ವದ ಸರ್ಕಾರವು ದೇಶವನ್ನು 'ಸುರಕ್ಷಿತ' ಎಂಬ ಭಾವನೆ ತರಿಸಿದ್ದಾರೆ. ಅದೇ ರೀತಿ ಮಹಾರಾಷ್ಟ್ರವನ್ನು ಸುರಕ್ಷಿತವನ್ನಾಗಿ ಮಾಡಲು ಮಹಾಯುತಿ ಸರ್ಕಾರದ ಅಗತ್ಯವಿದೆ. ಶರದ್ ಪವಾರ್ ಅವರು, 2014 ರಿಂದ 2019 ರ ಅವಧಿಯಲ್ಲಿ ಮರಾಠ ಸಮುದಾಯದ ಮೀಸಲಾತಿ ರದ್ದು ಮಾಡಿದ್ದರು. ಅದನ್ನು ಮತ್ತೆ ಜಾರಿಗೆ ತಂದಿದ್ದು, ಬಿಜೆಪಿ ಸರ್ಕಾರ. ಇದು ಮುಂದುವರಿಯಬೇಕಾದಲ್ಲಿ ಮತ್ತೆ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದರು.
ಶರದ್ ಪವಾರ್ ಸರ್ಕಾರ ಅಧಿಕಾರಕ್ಕೆ ಬಂದಾಗ, ಮರಾಠ ಕೋಟಾವನ್ನು ರದ್ದುಗೊಳಿಸಲಾಯಿತು. ಮಹಾಯುತಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಮರಾಠ ಸಮುದಾಯಕ್ಕೆ ಮೀಸಲಾತಿಯನ್ನು ಒದಗಿಸಲಾಯಿತು. ಆದ್ದರಿಂದ, ಬಿಜೆಪಿ ನೇತೃತ್ವದ ಎನ್‌ಡಿಎ/ಮಹಾಯುತಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕು. ಇದರಿಂದ ಮರಾಠ ಕೋಟಾ ಜಾರಿಯಲ್ಲಿರುತ್ತದೆ. ಮಹಾ ವಿಕಾಸ್ ಅಘಾಡಿ ಸರ್ಕಾರ ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದಾಗಲಿದೆ ಎಂದು ಗೃಹ ಸಚಿವರು ಹೇಳಿದರು.
ಇದನ್ನೂ ಓದಿ:ಹಿಂಸಾಚಾರ ಪೀಡಿತ ಬಾಂಗ್ಲಾದೇಶಿಯರಿಗೆ ಆಶ್ರಯ ನೀಡುವೆನೆಂದ ಸಿಎಂ ಮಮತಾ: ಬಿಜೆಪಿ ಕಿಡಿ - shelter to Bangladesh people