ಮುಂಬೈ (ಮಹಾರಾಷ್ಟ್ರ): ತಮ್ಮ ಬಗ್ಗೆ ಕೀಳು ಭಾಷೆ ಬಳಸಿದ್ದಾರೆಂದು ಆರೋಪಿಸಿ ಶಿವಸೇನೆ (ಯುಬಿಟಿ) ಸಂಸದ ಅರವಿಂದ್ ಸಾವಂತ್ ಅವರ ವಿರುದ್ಧ ಶಿವಸೇನಾ ನಾಯಕಿ ಶೈನಾ ಎನ್‌ಸಿ ದೂರು ನೀಡಿದ್ದಾರೆ. ಅವರ ದೂರಿನ ಮೇರೆಗೆ ಮುಂಬೈನ ನಾಗ್ಪಾಡಾ ಪೊಲೀಸ್ ಠಾಣೆ ಶುಕ್ರವಾರ ಪ್ರಕರಣ ದಾಖಲಿಸಲಾಗಿದೆ.
''ಚುನಾವಣಾ ಪ್ರಚಾರದ ವೇಳೆ 'ಆಮದು ಮಾಡಿಕೊಂಡ ಮಾಲ್' ಎಂದು ಹೇಳಿಕೆ ನೀಡುವ ಮೂಲಕ ಅರವಿಂದ್ ಸಾವಂತ್ ಸ್ತ್ರೀಯರನ್ನು ಅವಮಾನಿಸಿದ್ದಾರೆ. ಅವರು ಬಳಸಿದ ಭಾಷೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಹಾಗಾಗಿ ಅವರ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು' ಶೈನಾ ಎನ್‌ಸಿ ದೂರಿನಲ್ಲಿ ಮನವಿ ಮಾಡಿದ್ದರು.
ಅರವಿಂದ್ ಸಾವಂತ್ ಹೇಳಿಕೆಗೆ ಖಂಡನೆ:''ಶೈನಾ ಸ್ಥಿತಿ ನೋಡಿದರೆ ಪಾಪ ಅನ್ನಿಸುತ್ತದೆ. ತನ್ನ ಜೀವನವಿಡೀ ಬಿಜೆಪಿಯಲ್ಲಿದ್ದು ಈಗ ಬೇರೆ ಪಕ್ಷಕ್ಕೆ ಹೋಗಿದ್ದಾಳೆ. ಆದರೆ, ವಿದೇಶದಿಂದ ಆಮದಾದ ಮಾಲನ್ನು ಇಲ್ಲಿ ಸ್ವೀಕರಿಸುವುದಿಲ್ಲ. ಮೂಲ ಸರಕುಗಳನ್ನು ಮಾತ್ರ ಇಲ್ಲಿ ಸ್ವೀಕರಿಸಲಾಗುತ್ತದೆ. ನಮ್ಮ ಬಳಿ ಮೂಲ ಸರಕು (ಅಮೀನ್ ಪಟೇಲ್) ಇದೆ'' ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಲ್ಲದೇ ಚರ್ಚೆಗೆ ಗ್ರಾಸವಾಗಿತ್ತು. ಮಹಿಳೆಯರು ಸೇರಿದಂತೆ ಹಲವು ಮುಖಂಡರು ಅರವಿಂದ್ ಸಾವಂತ್ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದರು.
ಲೈಂಗಿಕ ನಿಂದನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಶೈನಾ ಅವರು ಮುಂಬರುವ ಚುನಾವಣೆಯಲ್ಲಿ ಮತದಾರರು ಇದಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುವುದರೊಂದಿಗೆ ನಾಗ್ಪಾಡಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ದೂರು ದಾಖಲಿಸುವುದರೊಂದಿಗೆ ಸಾವಂತ್ ಹೇಳಿಕೆಗೆ ಕ್ಷಮೆ ಯಾಚಿಸುವಂತೆ ಆಗ್ರಹಿಸಿದ್ದಾರೆ. ಸದ್ಯ ಭಾರತೀಯ ದಂಡ ಸಂಹಿತೆ ಕಾಯ್ದೆಯಡಿ ಸಾವಂತ್ ಅವರ ವಿರುದ್ಧ ಕಲಂ 79 ಮತ್ತು ಸೆಕ್ಷನ್ 356/2 ರ ಅಡಿ ಪ್ರಕರಣ ದಾಖಲಿಸಲಾಗಿದೆ.
ಅವಾಚ್ಯ ಶಬ್ದಗಳಿಂದ ನಿಂದಿಸಿದರೆ ಮಹಿಳೆಯರು ಸುಮ್ಮನಿರುವುದಿಲ್ಲ:ಎಫ್ಐಆರ್ ದಾಖಲು ಬಳಿಕ ಮಾತನಾಡಿದ ಶೈನಾ, ''ಶುಕ್ರವಾರ ಲಕ್ಷ್ಮೀ ಪೂಜೆಯ ದಿನ, 20 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ, ನಾನು ಓರ್ವ ಮಹಿಳೆ, ಸರಕಲ್ಲ. ಯಾವುದೇ ಮಹಿಳೆಯ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದರೆ ಮಹಿಳೆಯರು ಸುಮ್ಮನಿರುವುದಿಲ್ಲ'' ಎಂದು ಎಚ್ಚರಿಕೆ ನೀಡಿದರು.
ಉದ್ಧವ್ ಠಾಕ್ರೆ, ಸಂಜಯ್ ರಾವುತ್, ಶರದ್ ಪವಾರ್ ಏಕೆ ಸುಮ್ಮನಿದ್ದಾರೆ?:''ಓರ್ವ ಸ್ವಾಭಿಮಾನಿ ಮಹಿಳೆ ಏನು ಮಾಡಬೇಕೋ ಅದನ್ನು ಮಾಡಿದ್ದೇನೆ. ಉಳಿದದ್ದನ್ನು ಕಾನೂನು ತನ್ನ ಕ್ರಮ ತೆಗೆದುಕೊಳ್ಳುತ್ತದೆ. ಅವಹೇಳನಕಾರಿ ಹೇಳಿಕೆ ಬಳಸಿದ್ದರಿಂದ ಮಾನಹಾನಿ ಮತ್ತು ಮಾನನಷ್ಟದ ಬಗ್ಗೆ ಎಫ್ಐಆರ್ ದಾಖಲಿಸಲಾಗಿದೆ. ಅವರು ನನ್ನ ಕೆಲಸದ ಬಗ್ಗೆ ಚರ್ಚಿಸಬೇಕಿತ್ತು. ರಾಜಕೀಯವಾಗಿ ಹೇಳಿಕೆ ನೀಡಬಹುದಿತ್ತು. ಮಾನಹಾನಿ ಆಗುವ ರೀತಿಯಲ್ಲಿ ನಡೆದುಕೊಂಡಿದ್ದನ್ನು ನೋಡಿ ಯಾರೂ ಸುಮ್ಮನಿರುವುದಿಲ್ಲ. ನಾನು ಸ್ವಾಭಿಮಾನಿ ಮಹಿಳೆ. ಹಾಗಾಗಿ ಏನು ಮಾಡಬೇಕೋ ಅದನ್ನು ಮಾಡಿರುವೆ. ಮಹಿಳೆಯರಿಗೆ ಗೌರವ ನೀಡದ ಮಹಾ ವಿಕಾಸ್ ಅಘಾಡಿಗೆ ಮಹಾರಾಷ್ಟ್ರದ ಮಹಿಳೆಯರು ಬರುವ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ. ಮಾ ಮುಂಬಾ ದೇವಿಯ ಆಶೀರ್ವಾದ ನನ್ನ ಮೇಲಿದೆ. ನಾನು ಓರ್ವ ಮಹಿಳೆ. "ಸರಕು" ಅಲ್ಲ. ಕಾನೂನು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ನಾನು ಮುಂಬೈ ನಗರದ ಮಗಳು. ಮಹಿಳೆಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿ. ಇದು ಸಾವಂತ್ ಅವರ ಸಂಸ್ಕೃತಿಯೇ? ಉದ್ಧವ್ ಠಾಕ್ರೆ, ಸಂಜಯ್ ರಾವುತ್, ಶರದ್ ಪವಾರ್, ನಾನಾ ಪಟೋಲೆ ಏಕೆ ಮೌನವಾಗಿದ್ದಾರೆ'' ಎಂದು ಶೈನಾ ಎನ್‌ಸಿ ಪ್ರಶ್ನಿಸಿದ್ದಾರೆ.