ನವದೆಹಲಿ: ದೆಹಲಿ ಮತ್ತು ನೋಯ್ಡಾದ ಹಲವು ಶಾಲೆಗಳಿಗೆ ಶುಕ್ರವಾರ ಬಾಂಬ್ ಬೆದರಿಕೆ ಕರೆಗಳು ಬಂದಿದೆ. ಸೆಂಟ್ ಸ್ಟೀಪನ್, ಮಯೂರ್ ವಿಹಾರ್ ಸೇರಿದಂತೆ ಹಲವು ಪ್ರಮುಖ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆ ತಪಾಸಣೆ ಸಾಗಿದೆ. ಬಾಂಬ್ ನಿಷ್ಕ್ರಿಯ ದಳ ಹಾಗೂ ಡಾಗ್ ಸ್ವಾಡ್ ಮತ್ತು ಪೊಲೀಸರು ಬೆದರಿಕೆ ಕರೆ ಬಂದ ಸ್ಥಳದಲ್ಲಿ ತನಿಖೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿಯ ಮಯೂರ್ ವಿಹಾರ್ -1 ನಲ್ಲಿರುವ ಅಹ್ಲ್ಕಾನ್ ಇಂಟರ್ ನ್ಯಾಷನಲ್ ಸ್ಕೂಲ್ ಮತ್ತು ಸೆಂಟ್ ಸ್ಟೀಫನ್ ಕಾಲೇಜಿಗೆ ಬೆಳಗ್ಗೆ 6.40 ಹಾಗೂ 7.42ಕ್ಕೆ ಕ್ರಮವಾಗಿ ಬೆದರಿಕೆ ಸಂದೇಶವನ್ನು ಇಮೇಲ್ ಮೂಲಕ ಕಳುಹಿಸಲಾಗಿದೆ, ಈ ತಕ್ಷಣಕ್ಕೆ ಪ್ರಾಂಶುಪಾಲರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಅದರಂತೆ ಕಾರ್ಯ ಪ್ರವೃತ್ತರಾದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯದಳದ ಅಧಿಕಾರಿಗಳು ಶಾಲೆಗೆ ಹಾಜರಾಗಿ ತನಿಖೆ ಆರಂಭಿಸಿದ್ದಾರೆ.
ಶಾಲಾ ಆವರಣದಲ್ಲಿ ತಪಾಸಣೆ ನಡೆಸಲಾಗಿದ್ದು, ಯಾವುದೇ ರೀತಿಯ ಅನುಮಾನಾಸ್ಪದ ವಸ್ತುಗಳು ಲಭ್ಯವಾಗಿಲ್ಲ. ಬೆದರಿಕೆ ಸಂದೇಶದ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಇಂದು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದರು.