ಸಿಲಿಗುರಿ/ಬಂಕುರಾ :ಶ್ರಾವಣ ಸೋಮವಾರದಂದು ಭಕ್ತರು ಪಾದಯಾತ್ರೆ ಮೂಲಕ ಶಿವನ ಪೂಜೆಗೆ ತೆರಳುತ್ತಿದ್ದ ವೇಳೆ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ 9 ಜನ ಸಾವನ್ನಪ್ಪಿದ್ದು, 14ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆಗಳು ಪಶ್ಚಿಮ ಬಂಗಾಳದ ಸಿಲಿಗುರಿ ಮತ್ತು ಬಂಕುರಾ ಜಿಲ್ಲೆಗಳಲ್ಲಿ ಸಂಭವಿಸಿವೆ.
ಸಿಲಿಗುರಿಯಲ್ಲಿ ಭೀಕರ ರಸ್ತೆ ಅಪಘಾತ: ಇಂದು ಶ್ರಾವಣ ಸೋಮವಾರವಾದ ಹಿನ್ನೆಲೆ ಭಕ್ತರು ಪಾದಯಾತ್ರೆ ಮೂಲಕ ಶಿವನ ದೇವಾಲಯಕ್ಕೆ ತೆರಳುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಕಾರೊಂದು ಭಕ್ತರ ಮೇಲೆ ಹರಿದಿದ್ದು, ಸ್ಥಳದಲ್ಲೇ ಐವರು ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮತ್ತಿಬ್ಬರು ಭಕ್ತರು ಸಾವನ್ನಪ್ಪಿದ್ದು, ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಈ ಅಪಘಾತ ರಾಷ್ಟ್ರೀಯ ಹೆದ್ದಾರಿ 31 ರಲ್ಲಿ ಬಾಗ್ಡೋಗ್ರಾದ ಮುನಿ ಟೀ ಎಸ್ಟೇಟ್ ಬಳಿಯ ಹೌಡಿಜೋದಲ್ಲಿ ಸೋಮವಾರ ಮುಂಜಾನೆ ಸಂಭವಿಸಿದೆ.
ಪೊಲೀಸ್ ಮೂಲಗಳ ಪ್ರಕಾರ, ಮೃತರು ನಾಗರಿಕ ಸ್ವಯಂಸೇವಕ ಪ್ರಹ್ಲಾದ್ ರಾಯ್ (28), ಬಾಗ್ಡೋಗ್ರಾದ ತರಬಂಧ ನಿವಾಸಿ ಗೋಬಿಂದ್ ಸಿಂಗ್ (22), ಗೋಕುಲ್ಜೋಟ್ ನಿವಾಸಿಗಳಾದ ಅಮಲೇಶ್ ಚೌಧರಿ (20), ಕನಕ್ ಬರ್ಮನ್ (22), ಪ್ರಣಬ್ ರಾಯ್ (28) ಮತ್ತು ಪದಕಾಂತ ರಾಯ್ ಎಂದು ಗುರುತಿಸಲಾಗಿದೆ. ಈ ಅಪಘಾತದಲ್ಲಿ ಸಿಕ್ಕಿಂ ನಿವಾಸಿಯೂ ಸಾವನ್ನಪ್ಪಿದ್ದು, ಅವರ ಹೆಸರು ಮತ್ತು ಗುರುತು ಇನ್ನೂ ತಿಳಿದುಬಂದಿಲ್ಲ.
ಭಕ್ತರು ಜಂಗ್ಲಿ ಬಾಬಾ ದೇವಸ್ಥಾನದಲ್ಲಿ ಯಾತ್ರಿಕರು ಶಿವನ ತಲೆಯ ಮೇಲೆ ನೀರು ಸುರಿಯಲು ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಗಾಯಾಳುಗಳನ್ನು ರಕ್ಷಿಸಿ ಉತ್ತರ ಬಂಗಾಳ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಇಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.