ಅಮರಾವತಿ (ಆಂಧ್ರಪ್ರದೇಶ):ರಾಜ್ಯದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಒಟ್ಟು 11 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಕೃಷ್ಣಾ, ತಿರುಪತಿ, ಕಾಕಿನಾಡ ಮತ್ತು ಅನಕಾಪಲ್ಲಿ ಜಿಲ್ಲೆಗಳಲ್ಲಿ ಅಪಘಾತ ಸಂಭವಿಸಿದ್ದು, ಒಟ್ಟು 11 ಮಂದಿ ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ.
ಕೃಷ್ಣಾ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ:ಕೃಷ್ಣಾ ಜಿಲ್ಲೆಯ ಬಾಪುಲಪಾಡು ತಾಲೂಕಿನ ಕೋಡೂರುಪಾಡು ಎಂಬಲ್ಲಿ ಇಂದು ಬೆಳಗ್ಗೆ ರಸ್ತೆ ಅಪಘಾತ ಸಂಭವಿಸಿದೆ. ಮಂಗಳಗಿರಿಯಿಂದ ವಿಶಾಖಪಟ್ಟಣಂ ಕಡೆಗೆ ಕೂಲ್ಡ್ರಿಂಕ್ಸ್ ಸಾಗಿಸುತ್ತಿದ್ದ ಟ್ರಾಲಿ ಲಾರಿ ಚೆನ್ನೈ - ಕೋಲ್ಕತ್ತಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೊವ್ವೂರಿನಿಂದ ತಮಿಳುನಾಡಿಗೆ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ಮೊದಲು ಡಿವೈಡರ್ಗೆ ಡಿಕ್ಕಿ ಹೊಡೆದು ಮುಂದೆ ಬರುತ್ತಿದ್ದ ಟ್ರಾಲಿಗೆ ಗುದ್ದಿದೆ. ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಕಾರಿನಿಂದ ಕೆಳಗಿಳಿಸಿ ವಿಜಯವಾಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರನ್ನು ತಮಿಳುನಾಡು ನಿವಾಸಿಗಳು ಎಂದು ಗುರುತಿಸಲಾಗಿದೆ. ಸ್ವಾಮಿನಾಥನ್ ಅವರು ಕೊವ್ವೂರಿನಿಂದ ಫೈನಾನ್ಸ್ ವ್ಯವಹಾರ ಮಾಡಿ ವಾಪಸ್ ಆಗುತ್ತಿದ್ದರು ಎಂದು ವೀರವಳ್ಳಿ ಪೊಲೀಸರು ತಿಳಿಸಿದ್ದಾರೆ. ಮೃತರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ. ಮೃತರು ಸ್ವಾಮಿನಾಥನ್ (35), ರಾಕೇಶ್ (12), ರಾಧಾ ಪ್ರಿಯಾ (14), ಗೋಪಿ (31) ಎಂದು ಗುರುತಿಸಲಾಗಿದೆ. ಸತ್ಯ (30) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ವಿಜಯವಾಡ ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಹೆದ್ದಾರಿ ಗಸ್ತು ಸಿಬ್ಬಂದಿ ಕಾರನ್ನು ಪಕ್ಕಕ್ಕೆ ಎಳೆದರು.
ತಿರುಪತಿಯಲ್ಲಿ ಪ್ರತ್ಯೇಕ ಅಪಘಾತ, ನಾಲ್ವರು ಸಾವು:ತಿರುಪತಿ ಜಿಲ್ಲೆಯ ಚಂದ್ರಗಿರಿ ತಾಲೂಕಿನ ಪುತಲಪಟ್ಟು ನಾಯ್ಡುಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಪ್ರತ್ಯೇಕ ಅಪಘಾತಗಳು ಸಂಭವಿಸಿವೆ. ತಿರುಪತಿಯಿಂದ ಚಿತ್ತೂರಿಗೆ ತೆರಳುತ್ತಿದ್ದ ಕಾರು ಸಿ.ಮಲ್ಲಾವರಂನಲ್ಲಿ ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದು ಕಾರು ಹೊತ್ತಿ ಉರಿದಿದೆ. ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದೇ ಮಾರ್ಗದ ಎಂ.ಕೊಂಗರವಾರಿಪಲ್ಲಿಯಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ನೆಲ್ಲೂರಿನಿಂದ ವೆಲ್ಲೂರು ಸಿಎಂಸಿ ಆಸ್ಪತ್ರೆಗೆ ತೆರಳುತ್ತಿದ್ದಾಗ ಎಂ.ಕೊಂಗರವಾರಿಪಲ್ಲಿ ಎಂಬಲ್ಲಿ ಡಿವೈಡರ್ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರು ಜನರಲ್ಲಿ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.