ನವದೆಹಲಿ: ಲೋಕಸಭೆ ಚುನಾವಣೆ ವೇಳೆ ಬಿಜೆಪಿ ವಿರುದ್ಧ ಸೆಟೆದು ನಿಂತಿದ್ದ I.N.D.I.A ಕೂಟದ ವಿಪಕ್ಷಗಳು ಈಗ ತಮ್ಮಲ್ಲೇ ತಾವು ಬಡಿದಾಡಿಕೊಳ್ಳಲು ಶುರುವಿಟ್ಟುಕೊಂಡಿವೆ. ಮುಂಬರುವ ದೆಹಲಿ ಚುನಾವಣೆಗೂ ಮುನ್ನವೇ ಆಮ್ ಆದ್ಮಿ ಪಕ್ಷ (ಆಪ್) ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇದು ಕೂಟದ ಒಗ್ಗಟ್ಟಿನ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಬುಧವಾರವಷ್ಟೇ ಕಾಂಗ್ರೆಸ್ ಪಕ್ಷವು, ದೆಹಲಿಯ ಆಪ್ ಸರ್ಕಾರದ ವೈಫಲ್ಯಗಳನ್ನು ಬಹಿರಂಗಪಡಿಸಿ ಶ್ವೇತಪತ್ರ ಹೊರಡಿಸಿತ್ತು. ಜೊತೆಗೆ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು 'ದೇಶದ್ರೋಹಿ' ಎಂದು ಗಂಭೀರ ಆರೋಪ ಮಾಡಿತ್ತು. ಇದು ಆಪ್ ಪಕ್ಷವನ್ನು ಕೆರಳಿಸಿದೆ.
ಬಿಜೆಪಿ ಜೊತೆ ಒಳಒಪ್ಪಂದ: ಕಾಂಗ್ರೆಸ್ ಮಾಡಿರುವ ಆರೋಪಗಳಿಗೆ ತಿರುಗೇಟು ನೀಡಿರುವ ಆಪ್, ದೆಹಲಿ ಚುನಾವಣೆಗಾಗಿ ಬಿಜೆಪಿ ಜೊತೆ 'ಕೈ' ಪಕ್ಷವು ಒಳಒಪ್ಪಂದ ಮಾಡಿಕೊಂಡಿದೆ. ಜೊತೆಗೆ, ಕೇಜ್ರಿವಾಲ್ ಅವರ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡುತ್ತಿದೆ ಎಂದು ಟೀಕಿಸಿದೆ.
ದೆಹಲಿ ಮುಖ್ಯಮಂತ್ರಿ ಅತಿಶಿ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರು ಇಲ್ಲಿ ನಡೆದ ಜಂಟಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ, "ಕಾಂಗ್ರೆಸ್ ನಾಯಕರು ನಡೆದುಕೊಳ್ಳುತ್ತಿರುವ ರೀತಿ, ಇಂಡಿಯಾ ಒಕ್ಕೂಟಕ್ಕೆ ವಿರುದ್ಧವಾಗಿದೆ. ಅದರ ಏಕತೆಗೆ ಹಾನಿ ಮಾಡುತ್ತಿದೆ" ಎಂದು ಆರೋಪಿಸಿದರು.
"ಹರಿಯಾಣ ವಿಧಾನಸಭೆ ಚುನಾವಣೆಯ ವೇಳೆ ನಮ್ಮ ಪಕ್ಷವು, ಕಾಂಗ್ರೆಸ್ ವಿರುದ್ಧ ಒಂದೇ ಒಂದು ಟೀಕೆಯನ್ನೂ ಮಾಡಿರಲಿಲ್ಲ. ಇದೀಗ, ದೆಹಲಿ ಚುನಾವಣೆಗಾಗಿ ಕಾಂಗ್ರೆಸ್ ನಮ್ಮ ವಿರುದ್ಧವೇ ತಿರುಗಿಬಿದ್ದಿದೆ. ಬಿಜೆಪಿ ನಿರ್ದೇಶನದಂತೆ ನಡೆದುಕೊಳ್ಳುತ್ತಿದೆ. ಅದರ ಅಭ್ಯರ್ಥಿಗಳ ಪಟ್ಟಿಯು ಬಿಜೆಪಿ ಕಚೇರಿಯಲ್ಲಿ ತಯಾರಿಸಲಾಗಿದೆ" ಎಂದು ಸಂಜಯ್ ಸಿಂಗ್ ದೂರಿದರು.
"ಕಾಂಗ್ರೆಸ್ ನಾಯಕ ಅಜಯ್ ಮಾಕೆನ್ ಅವರು, ಆಪ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಬಿಜೆಪಿಯನ್ನು ಟೀಕೆ ಮಾಡಿಲ್ಲ. ಅರವಿಂದ್ ಕೇಜ್ರಿವಾಲ್ ಅವರನ್ನು ದೇಶದ್ರೋಹಿ ಎಂದು ಕರೆಯುವ ಮೂಲಕ ಅತಿರೇಕ ಮೆರೆದಿದ್ದಾರೆ. ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪರವಾಗಿ ಕೇಜ್ರಿವಾಲ್ ಅವರು ಪ್ರಚಾರ ನಡೆಸಿದ್ದರು ಎಂಬುದನ್ನು ಆ ಪಕ್ಷವು ಮರೆಯಬಾರದು" ಎಂದರು.
ಕೂಟದಿಂದ ಕಾಂಗ್ರೆಸ್ಗೆ ಗೇಟ್ಪಾಸ್? "ಅಜಯ್ ಮಾಕೆನ್ ಸೇರಿದಂತೆ ದೆಹಲಿ ಕಾಂಗ್ರೆಸ್ ನಾಯಕರ ವಿರುದ್ಧ 24 ಗಂಟೆಗಳ ಒಳಗೆ ಶಿಸ್ತುಕ್ರಮ ಜರುಗಿಸದಿದ್ದರೆ, ಇಂಡಿಯಾ ಕೂಟದಿಂದ ಕಾಂಗ್ರೆಸ್ಗೆ ಗೇಟ್ಪಾಸ್ ನೀಡಲು ಇತರ ವಿಪಕ್ಷಗಳನ್ನು ಕೋರಬೇಕಾಗುತ್ತದೆ. ಕೂಟದಿಂದಲೇ ಆ ಪಕ್ಷವನ್ನು ಹೊರಗಿಡಲಾಗುವುದು" ಎಂದು ಎಚ್ಚರಿಕೆ ನೀಡಿದರು.
ಸಿಎಂ ಅತಿಶಿ ಮಾತನಾಡಿ, "ಕಾಂಗ್ರೆಸ್ ನಾಯಕರು ಆಪ್ ಪಕ್ಷವನ್ನು ಟಾರ್ಗೆಟ್ ಮಾಡಿದ್ದಾರೆ. ಅದರ ಅಭ್ಯರ್ಥಿಗಳಾದ ಸಂದೀಪ್ ದೀಕ್ಷಿತ್ ಮತ್ತು ಫರ್ಹಾದ್ ಸೂರಿ ಬಿಜೆಪಿ ಬೆಂಬಲ ಪಡೆದುಕೊಂಡಿದ್ದಾರೆ. ಈ ಒಳಒಪ್ಪಂದವು ಇಂಡಿಯಾ ಮೈತ್ರಿಕೂಟದಲ್ಲಿ ಕಾಂಗ್ರೆಸ್‌ನ ಬದ್ಧತೆಯ ಮೇಲೆಯೇ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ" ಎಂದು ಹೇಳಿದರು.
ಇದನ್ನೂ ಓದಿ: ಕೇಜ್ರಿವಾಲ್ ದೇಶದ ಮಹಾನ್ ವಂಚಕ- ಅಜಯ್ ಮಾಕೆನ್: ಆಪ್, ಬಿಜೆಪಿ ವಿರುದ್ಧ ಕಾಂಗ್ರೆಸ್ ಶ್ವೇತಪತ್ರ