ಅಯೋಧ್ಯೆ, ಉತ್ತರಪ್ರದೇಶ: ಸಿಖ್ ಫಾರ್ ಜಸ್ಟೀಸ್ (ಎಸ್ಎಫ್ಜೆ) ಮತ್ತು ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು ದಾಳಿ ಮಾಡುವ ಬೆದರಿಕೆ ಒಡ್ಡಿದ ಬೆನ್ನಲ್ಲೇ ಅಯೋಧ್ಯೆಯ ರಾಮ ಮಂದಿರ ಆವರಣದಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ.
ನಿಷೇಧಿತ ಸಂಘಟನೆ ಎಸ್ಎಫ್ಜೆ ಇತ್ತೀಚಿಗೆ ಬಿಡುಗಡೆ ಮಾಡಿದ ವಿಡಿಯೋದಲ್ಲಿ ನವೆಂಬರ್ 16 ಮತ್ತು 17ರಂದು ಅಯೋಧ್ಯೆ ರಾಮ ಮಂದಿರದ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿರುವ ವಿಡಿಯೋವನ್ನು ಹಂಚಿಕೊಂಡಿತು.
ಈ ಬೆನ್ನಲ್ಲೇ ದೇಗುಲದ ಆವರಣ ಸೇರಿದಂತೆ ನಗರದ ಎಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ದೇಗುಲದ ಬಳಿ ಹೆಚ್ಚಿನ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಮಾತನಾಡಿರುವ ಎಸ್ಪಿ ಬಲರಾಮಚಾರಿ ದುಬೆ, ಎಟಿಎಸ್ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಭದ್ರತಾ ಮೇಲ್ವಿಚಾರಣೆ ಪರೀಕ್ಷೆ ನಡೆಸಿದೆ. ಯಾತ್ರಾರ್ಥಿಗಳ ದರ್ಶನ ಮಾರ್ಗದ ಮೇಲೂ ನಿಗಾ ಹೆಚ್ಚಿಸಲಾಗಿದೆ. 24 ಗಂಟೆಗಳೂ ದೇಗುಲದ ಮೇಲ್ವಿಚಾರಣೆ ನಡೆಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅಯೋಧ್ಯೆ ಸರ್ಕಲ್ ಅಧಿಕಾರಿ ಅಶುತೋಷ್ ತಿವಾರಿ ಮಾತನಾಡಿ, ಬಿಡುಗಡೆಯಾದ ಬೆದರಿಕೆ ದಾಳಿ ವಿಡಿಯೋದ ಸತ್ಯಾಸತ್ಯತೆ ಪರಿಶೀಲಿಸಲಾಗುತ್ತಿದ್ದು, ಎಲ್ಲ ಅಗತ್ಯ ಮುನ್ನೆಚ್ಚರಿಕೆ ನಡೆಸಲಾಗಿದೆ ಎಂದರು.