ನವದೆಹಲಿ: ಮೂರನೇ ಬಾರಿ ದೆಹಲಿ ವಿಧಾನಸಭೆಯ ಗದ್ದುಗೆ ಹಿಡಿಯಲು ಸಿದ್ಧತೆ ನಡೆಸುತ್ತಿರುವ ಆಮ್ ಆದ್ಮಿ ಪಕ್ಷ (AAP), ಚುನಾವಣೆ ಘೋಷಣೆಗೂ ಮುನ್ನವೇ ಮತದಾರರಿಗೆ ಭರ್ಜರಿ ಯೋಜನೆಗಳ ಭರವಸೆ ನೀಡುತ್ತಿದೆ. ಕಳೆದೆರಡು ದಿನಗಳ ಹಿಂದೆ ಆಟೋ ಚಾಲಕರಿಗೆ ಪಂಚ ಗ್ಯಾರಂಟಿ ಘೋಷಿಸಿತ್ತು. ಇದೀಗ ಮಹಿಳೆಯರಿಗೆ ನೀಡುತ್ತಿರುವ ಮಾಸಿಕ ಹಣವನ್ನು 1,000ದಿಂದ 2,100 ರೂ.ಗೆ ಹೆಚ್ಚಿಸುವ ಭರವಸೆ ಕೊಟ್ಟಿದೆ.
ಈ ಕುರಿತು ಮಾತನಾಡಿರುವ ಎಎಪಿ ಸಂಚಾಲಕರೂ ಆಗಿರುವ ಅರವಿಂದ್ ಕೇಜ್ರಿವಾಲ್, "ಸದ್ಯ ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆಯಡಿ ಮಹಿಳೆಯರಿಗೆ ಮಾಸಿಕವಾಗಿ 1,000 ರೂ ನೀಡಲಾಗುತ್ತಿದೆ. ಚುನಾವಣೆಯಲ್ಲಿ ಮತ್ತೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಈ ಹಣವನ್ನು 2,100ಕ್ಕೆ ಏರಿಸುತ್ತೇವೆ" ಎಂದರು.
ಮಹಿಳಾ ಸಮ್ಮಾನ್ ಯೋಜನೆ: ದೆಹಲಿ ಸರ್ಕಾರ 2024-25ರ ಬಜೆಟ್ನಲ್ಲಿ ಈ ಯೋಜನೆಯನ್ನು ಘೋಷಿಸಿತ್ತು. ಇದಕ್ಕಾಗಿ 2,000 ಕೋಟಿ ರೂಪಾಯಿ ಮೀಸಲಿಟ್ಟಿತ್ತು.