ನವದೆಹಲಿ: ವೈದ್ಯಕೀಯ ಪ್ರವೇಶಾತಿ ಪರೀಕ್ಷೆ 2024ರ ನೀಟ್ (ಯುಜಿ) ಅನ್ನು ಹೊಸದಾಗಿ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ಕುರಿತು ಪ್ರತಿಕ್ರಿಯಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ)ಗೆ ಸೂಚಿಸಿದೆ.
'ಪರೀಕ್ಷೆಯ ಪಾವಿತ್ರ್ಯತೆಗೆ ಧಕ್ಕೆಯಾಗಿದೆ, ಉತ್ತರ ಬೇಕಿದೆ': ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಇತರ ಅಕ್ರಮಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ನೀಟ್-ಯುಜಿ ಮರು ಪರೀಕ್ಷೆಗೆ ಒತ್ತಾಯಿಸಿ ಹಲವು ಅರ್ಜಿಗಳನ್ನು ಸಲ್ಲಿಸಲಾಗಿದೆ. ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರನ್ನೊಳಗೊಂಡ ರಜಾಕಾಲದ ಪೀಠ, ''ಇವು ಸಾಮಾನ್ಯ ಆರೋಪಗಳಲ್ಲ. ಪರೀಕ್ಷೆಯ ಪಾವಿತ್ರ್ಯತೆಗೆ ಧಕ್ಕೆಯಾಗಿದೆ. ಆದ್ದರಿಂದ ನಮಗೆ ಉತ್ತರ ಬೇಕಿದೆ'' ಎಂದು ಹೇಳಿತು.
ಕೌನ್ಸೆಲಿಂಗ್‌ಗೆ ತಡೆ ನೀಡಲು ನಿರಾಕರಿಸಿದ ಕೋರ್ಟ್: ಇದೇ ವೇಳೆ, ಎಂಬಿಬಿಎಸ್, ಬಿಡಿಎಸ್ (Bachelor of Dental Surgery) ಮತ್ತು ಇತರ ಕೋರ್ಸ್‌ಗಳ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳ ಕೌನ್ಸೆಲಿಂಗ್‌ಗೆ ತಡೆ ನೀಡಲು ಕೋರ್ಟ್ ನಿರಾಕರಿಸಿತು. ಮತ್ತೊಂದೆಡೆ, ನೀಟ್-ಯುಜಿ ನಡೆಸುವ ಕೇಂದ್ರ ಮತ್ತು ಎನ್‌ಟಿಎಗೆ ನೋಟಿಸ್ ಜಾರಿ ಮಾಡಿತು. ಬಿಹಾರದಲ್ಲಿ ಈ ಪರೀಕ್ಷಾ ಅವ್ಯವಹಾರ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಅಲ್ಲಿನ ರಾಜ್ಯ ಸರ್ಕಾರಕ್ಕೂ ನೋಟಿಸ್ ನೀಡಿದೆ.
ಏನಿದು ನೀಟ್-ಯುಜಿ?: ದೇಶಾದ್ಯಂತ ಎಂಬಿಬಿಎಸ್, ಬಿಡಿಎಸ್ ಮತ್ತು ಆಯುಷ್ ಮತ್ತು ಇತರ ಸಂಬಂಧಿತ ಕೋರ್ಸ್‌ಗಳ ಪ್ರವೇಶಕ್ಕಾಗಿ ಎನ್ಟಿಎ ಮೂಲಕ ನೀಟ್-ಯುಜಿ ಪರೀಕ್ಷೆ ನಡೆಸಲಾಗುತ್ತದೆ. 2024ನೇ ಸಾಲಿನ ಪರೀಕ್ಷೆ ಮೇ 5ರಂದು ನಡೆದಿತ್ತು. ಜೂನ್ 14ರಂದು ಫಲಿತಾಂಶ ಘೋಷಿಸುವ ನಿರೀಕ್ಷೆ ಇತ್ತು. ಆದರೆ, ಇದಕ್ಕೂ ಮುನ್ನ, ಜೂನ್ 4ರಂದೇ ಫಲಿತಾಂಶ ಪ್ರಕಟಿಸಲಾಗಿದೆ.
ಇದರ ನಡುವೆ ಪರೀಕ್ಷಾ ಅಕ್ರಮ ಆರೋಪಗಳ ಸಂಬಂಧ ಶಿವಂಗಿ ಮಿಶ್ರಾ ಮತ್ತಿತರ 9 ಎಂಬಿಬಿಎಸ್ ಆಕಾಂಕ್ಷಿಗಳು ಹೊಸದಾಗಿ ಪರೀಕ್ಷೆ ನಡೆಸುವಂತೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇಂದಿನ ವಿಚಾರಣೆ ವೇಳೆ, ವಿದ್ಯಾರ್ಥಿಗಳ ಕೌನ್ಸೆಲಿಂಗ್ ತಡೆಹಿಡಿಯುವಂತೆ ವಿದ್ಯಾರ್ಥಿಗಳ ಪರ ವಾದ ಮಂಡಿಸಿದ ವಕೀಲ ಮ್ಯಾಥ್ಯೂಸ್ ಜೆ.ನೆಡುಂಪರ ಒತ್ತಾಯಿಸಿದರು. ಆದರೆ, ನ್ಯಾಯಪೀಠವು ಇದಕ್ಕೆ ಒಪ್ಪಲಿಲ್ಲ.