ನವದೆಹಲಿ: ಅಕ್ಟೋಬರ್ 1 ರವರೆಗೆ ದೇಶಾದ್ಯಂತ ಬುಲ್ಡೋಜರ್ ಕಾರ್ಯಾಚರಣೆ ನಡೆಸದಂತೆ ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಒಂದು ವೇಳೆ ಅಕ್ರಮವಾಗಿ ನೆಲಸಮ ಕಾರ್ಯ ನಡೆದ ನಿದರ್ಶನ ಇದ್ದರೆ ಅದು ಸಂವಿಧಾನ ವಿರೋಧಿ ನೀತಿ ಆಗಲಿದೆ ಎಂದು ಅದು ಅಭಿಪ್ರಾಯಪಟ್ಟಿದೆ.
ಕಟ್ಟಡಗಳನ್ನು ಕೆಡವಲು ಆತುರ ಏಕೆ?: ದೇಶದ ವಿವಿಧ ಭಾಗಗಳಲ್ಲಿ ಬುಲ್ಡೋಜರ್ ನ್ಯಾಯ ವಿರುದ್ಧದ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠವು, ಕೋರ್ಟ್ ಅನುಮತಿಯಿಲ್ಲದೇ ದೇಶದಲ್ಲಿ ಯಾವುದೇ ನೆಲಸಮ ಕಾರ್ಯ ನಡೆಯಬಾರದು. 2022ರಲ್ಲಿ ನೋಟಿಸ್ ನೀಡಿದಾಗಿಯೂ ಕಟ್ಟಡಗಳನ್ನು ಕೆಡವಲು ಆತುರ ಏಕೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪ್ರಶ್ನಿಸಿತು.
ಮುಂದಿನ ವಿಚಾರಣೆಯ ದಿನಾಂಕದವರೆಗೆ ನ್ಯಾಯಾಲಯದ ಅನುಮತಿಯಿಲ್ಲದೇ ಯಾವುದೇ ನೆಲಸಮ ಕಾರ್ಯ ಮಾಡಬಾರದು ಎಂದು ನ್ಯಾಯಮೂರ್ತಿ ವಿಶ್ವನಾಥನ್ ಹೇಳಿದರು. ಇದಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಆಕ್ಷೇಪ ವ್ಯಕ್ತಪಡಿಸಿದರು.
"ಹೊರಗಿನ ದನಿ ನ್ಯಾಯಾಲಯದ ಮೇಲೆ ಪ್ರಭಾವ ಬೀರುವುದಿಲ್ಲ ಮತ್ತು ಯಾವ ಸಮುದಾಯದ ಮೇಲೆ ಪರಿಣಾಮ ಬೀರುತ್ತದೆ ಎಂಬ ಪ್ರಶ್ನೆ ಬಗ್ಗೆ ನ್ಯಾಯಾಲಯ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಅಕ್ರಮ ಧ್ವಂಸ ಪ್ರಕರಣಗಳು ಕಂಡುಬಂದರೆ ಅದು ಸಂವಿಧಾನದ ನೀತಿಗೆ ವಿರುದ್ಧವಾಗಿದೆ" ಎಂದು ನ್ಯಾಯಮೂರ್ತಿ ವಿಶ್ವನಾಥನ್ ಸ್ಪಷ್ಟಪಡಿಸಿದರು.