ನವದೆಹಲಿ:16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿರುವ 18ರ ಪ್ರಾಯದ ಯುವಕನಿಗೆ ಸುಪ್ರೀಂ ಕೋರ್ಟ್ ಶನಿವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಸಂತ್ರಸ್ತ ಬಾಲಕಿಯೊಂದಿಗೆ ಮತ್ತೆ ಯಾವುದೇ ರೀತಿಯ ಸಂಬಂಧ ಬೆಳೆಸುವ ಪ್ರಯತ್ನ ಮಾಡಬಾರದು ಎಂದು ಸೂಚಿಸಿದೆ.
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಎನ್.ಕೆ. ಸಿಂಗ್ ಅವರಿದ್ದ ಪೀಠವು ಈ ಆದೇಶ ಮಾಡಿದೆ. ಯುವಕನ ಭವಿಷ್ಯ ಮತ್ತು ಆರೋಪದ ಆಧಾರದ ಮೇಲೆ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಬಹುದಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟು, ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್ನ ಆದೇಶವನ್ನು ರದ್ದು ಮಾಡಿದೆ.
"ಮೇಲ್ಮನವಿದಾರನನ್ನು ಆದಷ್ಟು ಬೇಗ ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ವಿಚಾರಣಾ ನ್ಯಾಯಾಲಯವು ಆತನಿಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಿದೆ. ಆದರೆ, ಇವೆಲ್ಲವೂ ಷರತ್ತುಗಳಿಗೆ ಒಳಪಟ್ಟಿರುತ್ತದೆ" ಎಂದು ಪೀಠವು ತಿಳಿಸಿದೆ.
ಪ್ರಕರಣದ ವಿಚಾರಣೆಯ ವೇಳೆ ಆರೋಪಿ ಸಂಪೂರ್ಣ ಸಹಕಾರ ನೀಡಬೇಕು. ಆತ ಯಾವುದೇ ರೀತಿಯಲ್ಲಿ ತನ್ನ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಳ್ಳಬಾರದು. ಸಾಕ್ಷಿಗಳ ಮೇಲೆ ಯಾವುದೇ ರೀತಿಯಲ್ಲಿ ಪ್ರಭಾವ ಬೀರಬಾರದು ಎಂದು ಪೀಠವು ನಿರ್ದೇಶಿಸಿದೆ.
ಬಾಲಕಿ ಜೊತೆ ಸಂಪರ್ಕ ಬೇಡ:ಎಲ್ಲದಕ್ಕಿಂತ ಹೆಚ್ಚಾಗಿ, ಆರೋಪಿಯು ಸಂತ್ರಸ್ತ ಬಾಲಕಿಯ ಜೊತೆಗೆ ಸಾಮಾಜಿಕ ಮಾಧ್ಯಮ ಅಥವಾ ವ್ಯಕ್ತಿಗತವಾಗಿ ಸಂಪರ್ಕ ಸಾಧಿಸುವಂತಿಲ್ಲ. ಈ ಷರತ್ತುಗಳನ್ನು ಮೀರಿದಲ್ಲಿ ಆರೋಪಿಗೆ ನೀಡಲಾದ ಜಾಮೀನು ರದ್ದು ಮಾಡಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ನಮಿತ್ ಸಕ್ಸೇನಾ, ಆರೋಪಿತ ಯುವಕ ಬಂಧನವಾದಾಗ ಅಪ್ರಾಪ್ತನಾಗಿದ್ದ, ಇದೀಗ ಪ್ರಾಪ್ತ ವಯಸ್ಸಿಗೆ ಬಂದಿದ್ದಾನೆ. ಬಾಲಕಿಗೆ 16 ವರ್ಷವಾಗಿದೆ. ಇಬ್ಬರ ನಡುವೆ ಒಮ್ಮತದ ಸಂಬಂಧವಿತ್ತು ಎಂದು ತಿಳಿಸಿದರು. ಈ ವಾದವನ್ನು ಕೋರ್ಟ್ ಮಾನ್ಯ ಮಾಡಿದೆ.
ಜಾಮೀನು ನಿರಾಕರಿಸಿದ್ದ ಹೈಕೋರ್ಟ್:ಇದಕ್ಕೂ ಮೊದಲು, ಆರೋಪಿಯನ್ನು ಪ್ರಕರಣದಲ್ಲಿ ಮೇ 8, 2024 ರಂದು ಬಂಧಿಸಲಾಗಿತ್ತು. ಜೂನ್ 5 ರಂದು POCSO ನ್ಯಾಯಾಲಯದ ಮುಂದೆ ಆರೋಪಪಟ್ಟಿ ಸಲ್ಲಿಸಲಾಯಿತು. ವಿಚಾರಣಾ ನ್ಯಾಯಾಲಯವು ಜೂನ್ 25 ರಂದು ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಆರೋಪಿ ರಾಜಸ್ಥಾನ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ವಿಚಾರಣೆ ನಡೆಸಿದ್ದು ಕೋರ್ಟ್ ಜುಲೈ 16 ರಂದು ಅರ್ಜಿಯನ್ನು ವಜಾಗೊಳಿಸಿತ್ತು. ಮೇಲ್ಮನವಿದಾರರು ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ:ಚುನಾವಣೆಯಲ್ಲಿ ಬಹುಮತ ಬರದಿದ್ದರೆ ಬಿಜೆಪಿ ಜೊತೆ ಮೈತ್ರಿ ಇಲ್ಲ: ಫಾರೂಖ್ ಅಬ್ದುಲ್ಲಾ - JK polls