ನವದೆಹಲಿ: ತ್ರಿವಳಿ ತಲಾಖ್ ಹೇಳಿದ್ದಕ್ಕಾಗಿ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ, 2019ರ ಅಡಿಯಲ್ಲಿ ದಾಖಲಾದ ಪ್ರಕರಣಗಳ ಮಾಹಿತಿ ಒದಗಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. 2019 ರ ಕಾಯ್ದೆಯ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಮುಸ್ಲಿಂ ಸಂಘಟನೆಗಳು ಸಲ್ಲಿಸಿದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ನಿರ್ದೇಶನ ನೀಡಿದೆ.
1991 ರ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆಯ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ದಾಖಲಿಸಲಾದ 12 ಅರ್ಜಿಗಳ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಪಿ.ವಿ. ಸಂಜಯ್ ಕುಮಾರ್ ಅವರ ನ್ಯಾಯಪೀಠ, ಬಾಕಿ ಇರುವ ತ್ರಿವಳಿ ತಲಾಖ್ ಪ್ರಕರಣಗಳು ಮತ್ತು ಹೈಕೋರ್ಟ್ಗಳಲ್ಲಿ ವಿಚಾರಣೆಗೆ ಬಾಕಿ ಇರುವ ಇಂಥ ಪ್ರಕರಣಗಳ ಬಗ್ಗೆ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
"ಎರಡೂ ಪಕ್ಷಗಳು ಲಿಖಿತ ಹೇಳಿಕೆಗಳನ್ನು ದಾಖಲಿಸಬೇಕು. ದಾಖಲಾದ ಎಫ್ಐಆರ್ಗಳ ಸಂಖ್ಯೆಯ ಡೇಟಾ ನಮಗೆ ನೀಡಿ" ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ನಿರ್ದಿಷ್ಟ ಧರ್ಮಕ್ಕೆ ಸೇರಿದ ವ್ಯಕ್ತಿಗಳನ್ನು ದಂಡಿಸುವ ಉದ್ದೇಶದಿಂದ ಈ ಕಾನೂನನ್ನು ಜಾರಿಗೆ ತರಲಾಗಿದೆ. ಇದು ಗಂಭೀರ ಸಾರ್ವಜನಿಕ ಅಶಾಂತಿಗೆ ಕಾರಣವಾಗಬಹುದು ಮತ್ತು ಇದನ್ನು ನಿಯಂತ್ರಿಸದಿದ್ದರೆ, ಸಮಾಜದಲ್ಲಿ ಧ್ರುವೀಕರಣ ಮತ್ತು ಅಸಂಗತತೆಗೆ ಕಾರಣವಾಗಬಹುದು ಎಂದು ಅರ್ಜಿದಾರರು ವಾದಿಸಿದರು.