ನವದೆಹಲಿ: ಭಾರತದಲ್ಲಿ ಅಪರಾಧ ಎಸಗಿದ ಆರೋಪದಲ್ಲಿ ಬಂಧಿತರಾಗುವ ವಿದೇಶಿ ಪ್ರಜೆಗಳು ಜಾಮೀನಿನ ಮೇಲೆ ಹೊರಬಂದು ವಿದೇಶಕ್ಕೆ ಪಲಾಯನ ಮಾಡುವುದನ್ನು ತಡೆಗಟ್ಟಲು ಮಾರ್ಗಸೂಚಿಗಳನ್ನು ರೂಪಿಸುವಂತೆ ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ನ್ಯಾಯಪೀಠವು ನೈಜೀರಿಯಾ ಪ್ರಜೆಯೊಬ್ಬನಿಗೆ ಜಾಮೀನು ನೀಡದಂತೆ ಜಾರ್ಖಂಡ್ ರಾಜ್ಯವು ಸಲ್ಲಿಸಿದ ವಿಶೇಷ ರಿಟ್ ಅರ್ಜಿಯ ವಿಚಾರಣೆ ನಡೆಸಿತು. ನೈಜೀರಿಯಾ ಪ್ರಜೆಯಾಗಿರುವ ಆರೋಪಿಯು ಜಾಮೀನು ಷರತ್ತುಗಳನ್ನು ಉಲ್ಲಂಘಿಸಿ ಭಾರತವನ್ನು ತೊರೆದು ಪಲಾಯನ ಮಾಡಿದ್ದಾನೆ ಎಂದು ಜಾರ್ಖಂಡ್ ರಾಜ್ಯವು ನ್ಯಾಯಾಲಯಕ್ಕೆ ತಿಳಿಸಿತು.
ಕೇಂದ್ರ ಸರ್ಕಾರವನ್ನು ಈ ದಾವೆಯಲ್ಲಿ ಪಕ್ಷಗಾರರನ್ನಾಗಿ ಸೇರಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿತು ಮತ್ತು ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಅಥವಾ ಅವರಿಗೆ ಸಹಾಯ ಮಾಡುವ ವಕೀಲರನ್ನು ತನ್ನ ಮುಂದೆ ಹಾಜರಾಗುವಂತೆ ಸೂಚಿಸಿತು. ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ವಕೀಲ ಕಾನು ಅಗರ್ವಾಲ್, ಕೇಂದ್ರ ಸರ್ಕಾರ ಈಗಾಗಲೇ ಈ ವಿಷಯದ ಬಗ್ಗೆ ಪರಿಶೀಲನೆ ಮಾಡುತ್ತಿದೆ ಮತ್ತು ತಾನು ಕೈಗೊಳ್ಳಲಿರುವ ಮುಂದಿನ ಕಾರ್ಯವಿಧಾನಗಳ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಲಾಗುವುದು ಎಂದು ಹೇಳಿದರು.
ವಾದವನ್ನು ಆಲಿಸಿದ ನಂತರ ಸುಪ್ರೀಂ ಕೋರ್ಟ್, "ಇದು ಈ ನ್ಯಾಯಾಲಯದ ಮುಂದೆ ಬಂದಿರುವ ಇಂಥ ಏಕೈಕ ಘಟನೆಯಲ್ಲ ಮತ್ತು ಇಂತಹ ಪ್ರಕರಣಗಳು ಅಸಾಮಾನ್ಯವಲ್ಲ. ಆದ್ದರಿಂದ, ಈಂಥ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕು ಮತ್ತು ಈ ವಿಷಯದಲ್ಲಿ ಅನುಸರಿಸಬೇಕಾದ ಕಾರ್ಯವಿಧಾನಗಳು ಇಲ್ಲದಿದ್ದರೆ ಅದಕ್ಕಾಗಿ ಕಾರ್ಯವಿಧಾನವನ್ನು ರೂಪಿಸಬೇಕಾಗಿದೆ." ಎಂದು ಹೇಳಿತು.
ಜಾರ್ಖಂಡ್ನ ಪಿಎಸ್ ಸೈಬರ್ನಲ್ಲಿ 2019 ರಲ್ಲಿ ದಾಖಲಾದ ಎಫ್ಐಆರ್ಗೆ ಸಂಬಂಧಿಸಿದಂತೆ ಆರೋಪಿ ಅಲೆಕ್ಸ್ ಡೇವಿಡ್ @ ಎಂ.ಯು.ಹೆನ್ರಿ ವಿರುದ್ಧ ಭಾರತೀಯ ದಂಡ ಸಂಹಿತೆ, 1860 ರ ಸೆಕ್ಷನ್ 419, 420, 467, 468, 471 ಮತ್ತು 120 ಬಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 (ಡಿ) ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗಾಗಿ ಆರೋಪ ಹೊರಿಸಲಾಗಿದೆ. ಮೇ 2022 ರಲ್ಲಿ ಈ ವಿದೇಶಿ ಪ್ರಜೆಗೆ ಜಾರ್ಖಂಡ್ ಹೈಕೋರ್ಟ್ ಈತ ಜನವರಿ 2020 ರಿಂದ ಬಂಧನದಲ್ಲಿದ್ದ ಅಂಶವನ್ನು ಪರಿಗಣಿಸಿ ಜಾಮೀನು ನೀಡಿತ್ತು.
"ಅರ್ಜಿದಾರರ ಬಳಿಯಿಂದ ಸಿಮ್ ಕಾರ್ಡ್ ಹೊಂದಿರುವ ಹಲವಾರು ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ ನಕಲಿ ದಾಖಲೆಗಳನ್ನು ಬಳಸಿಕೊಂಡು ಸಿಮ್ ಕಾರ್ಡ್ಗಳನ್ನು ಪಡೆಯಲಾಗಿದೆ ಮತ್ತು ಸೈಬರ್ ಅಪರಾಧದಲ್ಲಿ ಈ ಅಂಶ ಪ್ರಮುಖವಾಗಿದೆ ಎಂದು ಪ್ರಾಸಿಕ್ಯೂಶನ್ ಹೇಳಿದ್ದರೂ, ಅರ್ಜಿದಾರನು 6.1.2020 ರಿಂದ ಬಂಧನದಲ್ಲಿದ್ದಾನೆ ಎಂಬ ಅಂಶವನ್ನು ಪರಿಗಣಿಸಿ, ಮೇಲೆ ಹೆಸರಿಸಲಾದವರನ್ನು 10,000 ರೂ.ಗಳ ಜಾಮೀನು ಬಾಂಡ್ ಮತ್ತು ಅದೇ ಮೊತ್ತದ ಎರಡು ಶ್ಯೂರಿಟಿಗಳನ್ನು ಸಲ್ಲಿಸಿದ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲು ನಿರ್ದೇಶಿಸಲಾಗಿದೆ." ಎಂದು ಜಾರ್ಖಂಡ್ ಹೈಕೋರ್ಟ್ ಹೇಳಿತ್ತು.
ಇದನ್ನೂ ಓದಿ : ಆನೆ ಬಳಕೆಗೆ ಕೋರ್ಟ್ ನಿರ್ಬಂಧ: ಧಾರ್ಮಿಕ ಉತ್ಸವ ಸಾಧ್ಯವೇ ಇಲ್ಲ ಎಂದ ಕೇರಳ ಸಚಿವ