ಮುಂಬೈ: ಮಹಾರಾಷ್ಟ್ರದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ (ಡಿಜಿಪಿ) ಸಂಜಯ್ ಕುಮಾರ್ ವರ್ಮಾ ಅವರನ್ನು ನೇಮಕ ಮಾಡಲಾಗಿದೆ. ಚುನಾವಣಾ ಆಯೋಗದ ಸೂಚನೆ ಮೇರೆಗೆ ಮಹಾರಾಷ್ಟ್ರ ಸರ್ಕಾರ ರಶ್ಮಿ ಶುಕ್ಲಾ ಅವರ ಅಧಿಕಾರ ಅವಧಿಗೆ ಮುನ್ನವೇ ಅವರನ್ನು ಸ್ಥಾನದಿಂದ ವರ್ಗಾವಣೆ ಮಾಡಿ, ಈ ನೇಮಕಾತಿ ನಡೆಸಿದೆ.
ಕಾನೂನು ಮತ್ತು ತಾಂತ್ರಿಕತೆಯ ಮಹಾ ನಿರ್ದೇಶಕರಾಗಿ ಅವರು ಸೇವೆ ಸಲ್ಲಿಸುತ್ತಿದ್ದು, 1990 ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಇವರು 2028ರ ಏಪ್ರಿಲ್ಗೆ ನಿವೃತ್ತಿ ಹೊಂದಲಿದ್ದಾರೆ.
ನವೆಂಬರ್ 20ಕ್ಕೆ ಚುನಾವಣೆಗೆ ಸಜ್ಜಾಗಿರುವ ಮಹಾರಾಷ್ಟ್ರದಲ್ಲಿ ವಿಪಕ್ಷಗಳು ನೀಡಿದ ದೂರಿನ ಆಧಾರದ ಮೇಲೆ ತಕ್ಷಣಕ್ಕೆ ರಾಜ್ಯ ಪೊಲೀಸ್ ನಿರ್ದೇಶಕರಾಗಿದ್ದ ಶುಕ್ಲಾ ಅವರನ್ನು ಹುದ್ದೆಯಿಂದ ಬದಲಾಯಿಸುವಂತೆ ಚುನಾವಣಾ ಆಯೋಗ ಸರ್ಕಾರಕ್ಕೆ ಸೂಚನೆ ನೀಡಿತ್ತು. ಮಹಾರಾಷ್ಟ್ರದ ಮೊದಲ ಮಹಿಳಾ ಡಿಜಿಪಿ ಎಂಬ ಹೆಗ್ಗಳಿಕೆಯನ್ನು ಶುಕ್ಲಾ ಹೊಂದಿದ್ದಾರೆ. ವಿಪಕ್ಷಗಳ ಫೋನ್ ಕರೆಗಳ ಕದ್ದಾಲಿಕೆಯ ಆರೋಪ ಶುಕ್ಲಾ ಅವರ ವಿರುದ್ಧ ಕೇಳಿಬಂದಿತ್ತು. ಹೀಗಾಗಿ ಅವರನ್ನು ವರ್ಗಾವಣೆ ಮಾಡುವಂತೆ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಮನವಿ ಮಾಡಿತ್ತು.
ಮುಂಬೈ ಪೊಲೀಸ್ ಆಯುಕ್ತರಾದ ವಿವೇಕ್ ಫನ್ಸಲ್ಕರ್ ಅವರಿಂದ ವರ್ಮಾ ಹುದ್ದೆಯ ಚಾರ್ಜ್ ಪಡೆಯಲಿದ್ದು, ಅವರಿಗೆ ಹೆಚ್ಚುವರಿಯಾಗಿ ಡಿಜಿಪಿ ಹುದ್ದೆ ನಿರ್ವಹಣೆ ಹೊಣೆಯನ್ನು ನೀಡಲಾಗಿದೆ. 2015ರಲ್ಲಿ ಕಮ್ಯೂನಿಸ್ಟ್ ನಾಯಕ ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣದ ತನಿಖೆಗಾಗಿ ರೂಪಿಸಿದ್ದ ವಿಶೇಷ ತನಿಖಾ ತಂಡದ ನೇತೃತ್ವವನ್ನು ವರ್ಮಾ ಹೊತ್ತಿದ್ದರು.
ಶುಕ್ಲಾ ಅವರ ಹುದ್ದೆ ಜವಾಬ್ದಾರಿಯನ್ನು ಮುಂದಿನ ಹಿರಿಯ ಐಪಿಎಸ್ ಅಧಿಕಾರಿಗೆ ನೀಡುವಂತೆ ಚುನಾವಣಾ ಆಯೋಗ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಸೂಚಿಸಿತ್ತು. ಜೊತೆಗೆ ಮಂಗಳವಾರ ಮಧ್ಯಾಹ್ನದೊಳಗೆ ಮೂವರು ಐಪಿಎಸ್ ಅಧಿಕಾರಿಗಳ ಹೆಸರುಳ್ಳ ಪಟ್ಟಿ ನೀಡುವಂತೆ ಸೂಚಿಸಿತ್ತು. ರಾಜ್ಯ ಸರ್ಕಾರ ಅದರಂತೆ ವರ್ಮಾ ಹೆಸರನ್ನು ಡಿಜಿಪಿ ಹುದ್ದೆಗೆ ಸೂಚಿಸಿತ್ತು.