ಕೋಲ್ಕತ್ತಾ/ಹೈದರಾಬಾದ್: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 370 ಸ್ಥಾನಗಳಲ್ಲಿ ಗೆಲ್ಲಬೇಕೆಂಬ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಪಶ್ಚಿಮ ಬಂಗಾಳದಂತಹ ಪ್ರಮುಖ ರಾಜ್ಯಗಳಲ್ಲಿ ಮಹಿಳಾ ಮತದಾರರನ್ನು ಸೆಳೆಯಲು ಬಿಜೆಪಿ ಯೋಜನೆ ರೂಪಿಸುತ್ತಿದೆ.
ಪಶ್ಚಿಮ ಬಂಗಾಳವು ಪ್ರತಿ 1,000 ಪುರುಷರಿಗೆ 968 ಮಹಿಳಾ ಮತದಾರರನ್ನು ಹೊಂದಿರುವ ರಾಜ್ಯವಾಗಿದೆ. ಅತ್ಯುತ್ತಮ ಮತದಾರರ ಲಿಂಗ ಅನುಪಾತವನ್ನು ಹೊಂದಿರುವುದರಿಂದ ತನ್ನ ಮೈಲಿಗಲ್ಲನ್ನು ತಲುಪಲು ಬಿಜೆಪಿ ರಾಜ್ಯದಲ್ಲಿ ಚುನಾವಣಾ ಕಾರ್ಯತಂತ್ರ ಸಿದ್ಧಪಡಿಸುತ್ತಿದೆ. 2019ರ ಚುನಾವಣೆಗೆ ಹೋಲಿಸಿದರೆ ಮಹಿಳಾ ಮತದಾರರ ಪ್ರಮಾಣ ಗಮನಾರ್ಹವಾಗಿ ಹೆಚ್ಚಳವಾಗಿದೆ. ಅಂದು 1,000 ಪುರುಷರಿಗೆ 949 ಮಹಿಳೆಯರು ಇದ್ದರು. ಅಂದಿನಿಂದ ಇದು ಸ್ಥಿರವಾಗಿ ಏರುತ್ತಿದೆ. ತೃಣಮೂಲ ಕಾಂಗ್ರೆಸ್ ಮಹಿಳಾ ಮತ್ತು ಮುಸ್ಲಿಮರ ಮತ ಬ್ಯಾಂಕ್ ಹೊಂದಿದೆ. ಮಹಿಳಾ ಮತದಾರರಲ್ಲಿ ಬಹಳ ಜನಪ್ರಿಯವಾಗಿರುವ ಮಮತಾ ಬ್ಯಾನರ್ಜಿ ತಮ್ಮ ಭದ್ರಕೋಟೆಯನ್ನಾಗಿ ಮಾಡಿಕೊಂಡಿದ್ದಾರೆ.
ಇದೀಗ 2021ರ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಚುನಾವಣಾ ಯಶಸ್ಸಿಗೆ ಪ್ರಮುಖ ಕೊಡುಗೆ ನೀಡಿದ್ದ ಸಂದೇಶಖಾಲಿ ಕ್ಷೇತ್ರವು ಬಿಜೆಪಿಯ ಚುನಾವಣಾ ಮುಂದಡಿಯ ವಿಷಯವಾಗಿದೆ. ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಬರುವ ಆಲೋಚನೆಯಲ್ಲಿರುವಾಗ ಗಣನೀಯ ಮಹಿಳಾ ಮತದಾರರನ್ನು ಹೊಂದಿರುವ ಸಂದೇಶಖಾಲಿ ವಿಷಯ ಮುನ್ನೆಲೆಗೆ ಬಂದಿದೆ. ತೃಣಮೂಲದ ಪ್ರಬಲ ವ್ಯಕ್ತಿ ಶೇಖ್ ಶಾಜಹಾನ್ ಇಲ್ಲಿನ ಮಹಿಳೆಯರ ಮೇಲಿನ ದೌರ್ಜನ್ಯಗಳಲ್ಲಿ ಭಾಗಿಯಾಗಿರುವುದು ಪ್ರಮುಖ ಚುನಾವಣಾ ವಿಷಯವಾಗಿ ಮಾರ್ಪಟ್ಟಿದೆ. ಇದನ್ನೇ ಬಿಜೆಪಿ ಲಾಭ ಮಾಡಿಕೊಳ್ಳಲು ಬಯಸಿದೆ.
ಲೋಕಸಭೆ ಚುನಾವಣೆಗೆ ಮುನ್ನ ಸಂದೇಶಖಾಲಿ ವಿಚಾರದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಶುಕ್ರವಾರ ಪ್ರಧಾನಿ ಮೋದಿ ವಾಗ್ದಾಳಿ ಮಾಡಿದ್ದಾರೆ. ಸಂದೇಶಖಾಲಿ ಸಹೋದರಿಯರೊಂದಿಗೆ ಟಿಎಂಸಿ ಯಾವ ರೀತಿ ನಡೆಸಿಕೊಂಡಿದೆ ಎಂಬುದನ್ನು ದೇಶವೇ ನೋಡುತ್ತಿದೆ. ಇಡೀ ದೇಶವೇ ಆಕ್ರೋಶಗೊಂಡಿದೆ. ಸಂದೇಶಖಾಲಿಯಲ್ಲಿ ನಡೆದ ಘಟನೆಯಿಂದ ರಾಜಾ ರಾಮ್ ಮೋಹನ್ ರಾಯ್ ಅವರ ಆತ್ಮಕ್ಕೆ ನೋವಾಗಿದೆ ಎಂದು ಮೋದಿ ಹೇಳಿದ್ದರು. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಭೂಹಗರಣದ ಆರೋಪ ಹೊತ್ತಿರುವ ಟಿಎಂಸಿ ನಾಯಕ ಶೇಖ್ ಷಹಜಹಾನ್ ಹೆಸರನ್ನು ಉಲ್ಲೇಖಿಸದೆ ಮೋದಿ, ಟಿಎಂಸಿ ನಾಯಕರೊಬ್ಬರು ಎಲ್ಲ ಮಿತಿಗಳನ್ನು ಮೀರಿದ್ದಾರೆ. ರಾಜ್ಯದ ಬಿಜೆಪಿ ನಾಯಕರು ಮಹಿಳೆಯರ ಗೌರವ ಮತ್ತು ಘನತೆಗಾಗಿ ಹೋರಾಡುತ್ತಿದ್ದಾರೆ ಎಂದು ತಿಳಿಸಿದ್ದರು.