ಥಾಣೆ (ಮಹಾರಾಷ್ಟ್ರ):ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಥಾಣೆಯಲ್ಲಿ ಇಂದು ನಸುಕಿನ ಜಾವ ಪ್ರಮುಖ ಆರೋಪಿಯನ್ನ ಬಂಧಿಸಿದ್ದಾರೆ. ಮೊಹಮ್ಮದ್ ಶರೀಫ್ ಉಲ ಇಸ್ಲಾಂ ಶೆಹಜಾದ್ (30) ಬಂಧಿತ ಆರೋಪಿ.
ಬಂಧಿತ ಆರೋಪಿ ಬಾಂಗ್ಲಾದೇಶದ ಪ್ರಜೆಯಾಗಿದ್ದಾರೆ. ಈತನ ಮೂಲಕ ಹೆಸರು ಮೊಹಮ್ಮದ್ ಶರೀಫ್ ಉಲ ಇಸ್ಲಾಂ ಶೆಹಜಾದ್. ಆದರೆ ಭಾರತಕ್ಕೆ ಬಂದ ಮೇಲೆ ವಿಜಯ್ ದಾಸ್, ಬಿಜೋಯ್ ದಾಸ್ ಅಂತಾ ಹೆಸರು ಬದಲಿಸಿಕೊಂಡು ಓಡಾಡುತ್ತಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೊಬೈಲ್ ಟವರ್ ಲೊಕೇಶನ್ ಸಹಾಯದಿಂದ ಪೊಲೀಸರು ಆರೋಪಿಯನ್ನ ಪತ್ತೆ ಹಚ್ಚಿದ್ದಾರೆ. ಆರೋಪಿ ಮೊಹಮ್ಮದ್ ಮೊಬೈಲ್ ಟವರ್ ಲೊಕೇಶನ್ ವಡವ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ಹಿರಾನಂದನಿ ಎಸ್ಟೇಟ್‌ನಲ್ಲಿ ಪತ್ತೆಯಾಗಿತ್ತು. ವಿಜಯ್ ದಾಸ್ ಕೆಲವು ವರ್ಷಗಳಿಂದ ಹಿರಾನಂದಾನಿ ಪ್ರದೇಶದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿ ಆರೋಪಿಯನ್ನ ಹಿರನಂದಾನಿ ಕಾರ್ಮಿಕರ ಕ್ಯಾಂಪ್ ಬಳಿ ಬಂಧಿಸಿದ್ದಾರೆ ಎಂದು ಹಿರಿಯ ಮುಂಬೈ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಪಿ ಬಾಂಗ್ಲಾದೇಶದ ಪ್ರಜೆ. ಈತನ ಬಳಿ ಭಾರತದ ಯಾವುದೇ ಗುರುತಿನ ಚೀಟಿ, ದಾಖಲೆಗಳಿಲ್ಲ. ಭಾರತಕ್ಕೆ ಬಂದು ಹೆಸರು ಬದಲಿಸಿಕೊಂಡಿದ್ದಾನೆ. ಕಳೆದ ಐದಾರು ತಿಂಗಳ ಹಿಂದೆ ಮುಂಬೈಗೆ ಬಂದು ಇಲ್ಲೇ ನೆಲೆಸಿದ್ದಾನೆ. ಮನೆಕೆಲಸದ ಏಜೆನ್ಸಿಯಲ್ಲಿ ಈತ ಕೆಲಸ ಮಾಡುತ್ತಿದ್ದ. ನಟ ಸೈಫ್ ಅಲಿ ಖಾನ್ ಮನೆಗೆ ಈತ ಕಳ್ಳತನಕ್ಕೆಂದು ನುಗ್ಗಿದ್ದ. ಆರೋಪಿಯನ್ನು ಕೋರ್ಟ್ಗೆ ಹಾಜರಿಪಡಿಸಿ, ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವುದಾಗಿ ಡಿಸಿಪಿ ದೀಕ್ಷಿತ್ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಘಟನೆ ವಿವರ :ಗುರುವಾರ ನಸುಕಿನ ಜಾವ ಮುಂಬೈನ ಬಾಂದ್ರಾದಲ್ಲಿರುವ ಬಾಲಿವುಡ್ ಸೂಪರ್ ಸ್ಟಾರ್ ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿದ ದುಷ್ಕರ್ಮಿ, ಚಾಕುವಿನಿಂದ ಇರಿದು ಪರಾರಿಯಾಗಿದ್ದ. ನಟನಿಗೆ ಚಾಕುವಿನಿಂದ 6 ಬಾರಿ ಇರಿದಿದ್ದ. ಇದರಿಂದಾಗಿ ಸೈಫ್ ಅಲಿ ಖಾನ್ ಅವರ ಬೆನ್ನುಮೂಳೆ ಮತ್ತು ಕುತ್ತಿಗೆಯ ಬಳಿ ಗಂಭೀರ ಗಾಯಗಳಾಗಿದ್ದವು. ನಂತರ ಅವರನ್ನು ಆಟೋರಿಕ್ಷಾದಲ್ಲಿ ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.