ನವದೆಹಲಿ:ಸಬರಮತಿ ಎಕ್ಸ್ಪ್ರೆಸ್ ಪ್ಯಾಸೆಂಜರ್ ರೈಲಿನ 20 ಬೋಗಿಗಳು ಹಳಿತಪ್ಪಿರುವ ಘಟನೆ ಶನಿವಾರ ಮುಂಜಾನೆ ಸಂಭವಿಸಿದೆ. 2:30 ಗಂಟೆ ಸುಮಾರಿಗೆ ಉತ್ತರ ಪ್ರದೇಶದ ಕಾನ್ಪುರ ಮತ್ತು ಭೀಮಸೇನ್ ನಿಲ್ದಾಣದ ನಡುವೆ ಘಟನೆ ನಡೆದಿದೆ ಎಂದು ರೈಲ್ವೆ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸದ್ಯಕ್ಕೆ ಘಟನೆಯಲ್ಲಿ ಯಾವೊಬ್ಬ ವ್ಯಕ್ತಿಗೂ ಕೂಡ ಗಾಯಗಳಾಗಿಲ್ಲ. "ಸಬರಮತಿ ಎಕ್ಸ್ಪ್ರೆಸ್ನ ಇಂಜಿನ್ ಇಂದು ಬೆಳಗಿನ ಜಾವ 02:35ಕ್ಕೆ ಕಾನ್ಪುರ ಬಳಿ ಟ್ರ್ಯಾಕ್ನಲ್ಲಿ ಇರಿಸಲಾಗಿದ್ದ ವಸ್ತುವೊಂದಕ್ಕೆ ಡಿಕ್ಕಿ ಹೊಡೆದು ಹಳಿತಪ್ಪಿದೆ. ಇಂಜಿನ್ಗೆ ತೀವ್ರ ಹೊಡೆತ ಬಿದ್ದಿರುವ ಗುರುತುಗಳು ಕಂಡುಬಂದಿದ್ದು, ಸಾಕ್ಷ್ಯ ಕಲೆ ಹಾಕಲಾಗಿದೆ. ಐಬಿ ಮತ್ತು ಯುಪಿ ಪೊಲೀಸರು ತನಿಖೆ ಕಾರ್ಯ ಮಾಡುತ್ತಿದ್ದಾರೆ. ಯಾವುದೇ ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ಗಾಯಗಳಾಗಿಲ್ಲ. ಪ್ರಯಾಣಿಕರಿಗೆ ಪ್ರತ್ಯೇಕ ಸಾರಿಗೆ ವ್ಯವಸ್ಥೆ ಮಾಡಲಾಗಿದೆ" ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಘಟನೆಯಲ್ಲಿ ಬೋಗಿಗಳಿಗೆ ಹಾನಿ ಉಂಟಾಗಿದೆ. ರೈಲ್ವೇ ಹಳಿಯಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ಭಾರತೀಯ ರೈಲ್ವೆ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದೆ. ''ಹಳಿತಪ್ಪಿದ ಕಾರಣ 7 ರೈಲುಗಳನ್ನು ರದ್ದುಗೊಳಿಸಿ, ಮೂರು ಮಾರ್ಗಗಳನ್ನು ಬದಲಾಯಿಸಲಾಗಿದೆ. ಅಪಘಾತ ಸ್ಥಳದಿಂದ ಕಾನ್ಪುರ ರೈಲು ನಿಲ್ದಾಣಕ್ಕೆ ಪ್ರಯಾಣಿಕರನ್ನು ಸಾಗಿಸಲು ಬಸ್ಗಳ ವ್ಯವಸ್ಥೆ ಮಾಡಲಾಗಿದೆ'' ಎಂದು ಉತ್ತರ ಮಧ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಶಿಕಾಂತ ತ್ರಿಪಾಠಿ ಮಾಹಿತಿ ನೀಡಿದ್ದಾರೆ.