ನವದೆಹಲಿ: ಫೆಬ್ರವರಿ 1ರಂದು ಮಂಡಿಸಿದ ಮಧ್ಯಂತರ ಬಜೆಟ್ನಲ್ಲಿ ಘೋಷಿಸಲಾದ ಮೇಲ್ಛಾವಣಿ ಸೌರ ಯೋಜನೆಯನ್ನು 'ಪಿಎಂ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆ' ಎಂದು ಕರೆಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ. ಈ ಬಗ್ಗೆ ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಯೋಜನೆಯ ಗುರಿ, ಅನುಕೂಲವೇನು?: 75,000 ಕೋಟಿ ರೂ. ಹೂಡಿಕೆಯ ಮೇಲ್ಛಾವಣಿ ಸೌರ ಯೋಜನೆಯು ಪ್ರತಿ ತಿಂಗಳು 300 ಯೂನಿಟ್‌ವರೆಗೆ ಉಚಿತ ವಿದ್ಯುತ್ ಒದಗಿಸುವ ಮೂಲಕ 1 ಕೋಟಿ ಮನೆಗಳನ್ನು ಬೆಳಗಿಸುವ ಗುರಿಯನ್ನು ಹೊಂದಿದೆ. ಸುಸ್ಥಿರ ಅಭಿವೃದ್ಧಿ ಮತ್ತು ಜನರ ಯೋಗಕ್ಷೇಮವನ್ನು ಮತ್ತಷ್ಟು ಸುಧಾರಿಸಲು ತಮ್ಮ ಸರ್ಕಾರ ಪಿಎಂ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆಯನ್ನು ಪ್ರಾರಂಭಿಸುತ್ತಿದೆ ಎಂದು ಮೋದಿ ತಿಳಿಸಿದ್ದಾರೆ.
"ಜನರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುವ ಗಣನೀಯ ಸಬ್ಸಿಡಿಗಳಿಂದ ಹಿಡಿದು ಭಾರಿ ರಿಯಾಯಿತಿಯ ಬ್ಯಾಂಕ್ ಸಾಲಗಳವರೆಗೆ, ಜನರ ಮೇಲೆ ಯಾವುದೇ ವೆಚ್ಚದ ಹೊರೆಯಾಗದಂತೆ ಕೇಂದ್ರ ಸರ್ಕಾರ ನೋಡಿಕೊಳ್ಳಲಿದೆ. ಎಲ್ಲಾ ಪಾಲುದಾರರನ್ನು ರಾಷ್ಟ್ರೀಯ ಆನ್ಲೈನ್ ಪೋರ್ಟಲ್ಗೆ ಸಂಯೋಜಿಸಲಾಗುವುದು. ಇದು ಮತ್ತಷ್ಟು ಅನುಕೂಲವಾಗಲಿದೆ" ಎಂದು ಅವರು ಹೇಳಿದ್ದಾರೆ.
ಹೀಗೆ ಅರ್ಜಿ ಸಲ್ಲಿಸಿ: ಪಿಎಂ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆಯು ಹೆಚ್ಚಿನ ಆದಾಯ, ಕಡಿಮೆ ವಿದ್ಯುತ್ ಬಿಲ್ ಮತ್ತು ಜನರಿಗೆ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ. ವಸತಿ ಹೊಂದಿರುವ ನಾಗರಿಕರು ಈ ಸೌರ ಯೋಜನೆಗೆ ಅರ್ಜಿ ಸಲ್ಲಿಸಲು ವೆಬ್ಸೈಟ್ನ ವಿಳಾಸವನ್ನು ಪ್ರಧಾನಿ ಹಂಚಿಕೊಂಡಿದ್ದಾರೆ. https://pmsuryaghar.gov.in ಈ ವೆಬ್ಸೈಟ್ಗೆ ಭೇಟಿ ನೀಡಿ ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸುವಂತೆ ಅವರು ಮನವಿ ಮಾಡಿದ್ದಾರೆ.
ಸೋಲಾರ್ ರೂಪ್ ಟಾಪ್ ಅಳವಡಿಸುವ ಪ್ರತಿ ಮನೆಗೆ ವಾರ್ಷಿಕವಾಗಿ ಉಚಿತ ವಿದ್ಯುತ್ ಮತ್ತು ಹೆಚ್ಚುವರಿ ವಿದ್ಯುತ್ ಅನ್ನು ಕಂಪನಿಗಳಿಗೆ ಮಾರಾಟ ಮಾಡುವ ಮೂಲಕ 15 ರಿಂದ 18 ಸಾವಿರ ರೂಪಾಯಿ ಉಳಿತಾಯವಾಗಲಿದೆ ಎಂದು ಸರ್ಕಾರ ನಿರೀಕ್ಷಿಸಿದೆ. ಅಲ್ಲದೆ ಈ ವಿದ್ಯುತ್ ಅನ್ನು ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಮಾಡಲು ಬಳಸಬಹುದು. ಇನ್ನು ಈ ಯೋಜನೆಯನ್ನು ಅನುಷ್ಠಾನ ಮಾಡಲು ಸೋಲಾರ್ ತಂತ್ರಜ್ಞಾನದಲ್ಲಿ ಕೌಶಲ ಹೊಂದಿದ ಯುವಕರಿಗೆ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಸರ್ಕಾರ ಹೇಳಿದೆ.
ಭಾರತವು ತನ್ನ ಇಂಧನ ಅಗತ್ಯಗಳಿಗೆ ಕಲ್ಲಿದ್ದಲು ಆಧಾರಿತ ವಿದ್ಯುತ್ ಮೂಲಗಳನ್ನು ಗಣನೀಯವಾಗಿ ಅವಲಂಬಿಸಿದೆ. ಹೀಗಾಗಿ ಈ ಸೌರ ಮೇಲ್ಛಾವಣಿ ಯೋಜನೆಯು ಸಾಂಪ್ರದಾಯಿಕ ವಿದ್ಯುತ್ ಮೂಲಗಳ ಅವಲಂಬನೆಯನ್ನು ಕಡಿಮೆ ಮಾಡುವ ಸಾಧ್ಯತೆಯಿದೆ.
ಇದನ್ನೂ ಓದಿ: ಜೆಇಇ ಫಲಿತಾಂಶ: 23 ವಿದ್ಯಾರ್ಥಿಗಳಿಗೆ 100ಕ್ಕೆ 100 ಅಂಕ, ತೆಲಂಗಾಣದ 7, ಕರ್ನಾಟಕದ ಒಬ್ಬ ಟಾಪರ್
ಈ ಯೋಜನೆಯ ಪ್ರಯೋಜನಗಳು:
- ಸೋಲಾರ್ ಮೇಲ್ಛಾವಣಿ ಅಳವಡಿಸುವವರಿಗೆ ವಾರ್ಷಿಕ 15-18 ಸಾವಿರ ರೂ. ಉಳಿತಾಯ
- ಈ ಸೌರ ವಿದ್ಯುತ್ ಅನ್ನು ಮನೆಯ ಅಗತ್ಯಗಳಿಗೆ ಬಳಸಬಹುದು ಮತ್ತು ಉಳಿದ ಕರೆಂಟ್ ಅನ್ನು ಮಾರಾಟ ಮಾಡಬಹುದು
- ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಬಹುದು
- ಈ ಯೋಜನೆಯ ಮೂಲಕ ಸೌರ ಫಲಕಗಳನ್ನು ಪೂರೈಸುವ ಅನೇಕ ಕೈಗಾರಿಕೆಗಳು ಸೌರ ಮೇಲ್ಛಾವಣಿ ಸ್ಥಾಪಿಸಲು ಅವಕಾಶಗಳನ್ನು ಪಡೆಯುತ್ತವೆ
- ಸೋಲಾರ್ ಸಿಸ್ಟಮ್‌ಗಳ ತಯಾರಿಕೆ, ನಿರ್ವಹಣೆ ಮತ್ತು ಸ್ಥಾಪನೆಯಲ್ಲಿ ತಾಂತ್ರಿಕ ಕೌಶಲ್ಯ ಹೊಂದಿರುವ ಯುವಕರಿಗೆ ಉದ್ಯೋಗಾವಕಾಶಗಳು ಲಭಿಸಲಿವೆ
ಹೀಗೆ ಅರ್ಜಿ ಸಲ್ಲಿಸಿ:ಬಡತನ ರೇಖೆಗಿಂತ ಕೆಳಗಿರುವ ಮತ್ತು ಕಡಿಮೆ ಆದಾಯ ಹೊಂದಿರುವವರು https://pmsuryaghar.gov.in ವೆಬ್ಸೈಟ್ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಈ ವೆಬ್ಸೈಟ್ನಲ್ಲಿ ಅಪ್ಲೈ ಫಾರ್ ರೂಫ್‌ಟಾಪ್ ಸೋಲಾರ್ ಆಯ್ಕೆ ಕ್ಲಿಕ್ ಮಾಡಬೇಕು. ನಂತರ ವಿವರಗಳೊಂದಿಗೆ ನೋಂದಾಯಿಸಿಕೊಳ್ಳಬೇಕು. ಬಳಿಕ ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಆಗಿ ಸೌರ ಮೇಲ್ಛಾವಣಿಯ ಫಾರ್ಮ್ ಭರ್ತಿ ಮಾಡಬೇಕು. ಆ ನಂತರ ಡಿಸ್ಟ್ರಿಬ್ಯುಷನ್ ಕಂಪನಿಗಳ ಮೂಲಕ ಸೌರ ಮೇಲ್ಛಾವಣಿಯನ್ನು ಸ್ಥಾಪಿಸಬಹುದು. ಸೌರ ಫಲಕ ಅನುಷ್ಠಾನವಾದ ಬಳಿಕ ಆ ಘಟಕದ ವಿವರಗಳನ್ನು ಸಲ್ಲಿಸಿ ಮತ್ತು ನೆಟ್ ಮೀಟರ್‌ಗೆ ಅರ್ಜಿ ಸಲ್ಲಿಸಬೇಕು. ನೆಟ್ ಮೀಟರ್ ಬಂದ ನಂತರ, ನಿಮ್ಮ ಮೇಲ್ಛಾವಣಿಯನ್ನು ಡಿಸ್ಟ್ರಿಬ್ಯುಷನ್ ಅಧಿಕಾರಿಗಳು ಪರಿಶೀಲಿಸಿ ಪ್ರಮಾಣಪತ್ರ ನೀಡುತ್ತಾರೆ. ಬಳಿಕ ಈ ಪ್ರಮಾಣಪತ್ರದ ಜೊತೆಗೆ ರದ್ದುಗೊಂಡ ಬ್ಯಾಂಕ್ ಚೆಕ್ ಅನ್ನು 'ಪಿಎಂ ಸೂರ್ಯಘರ್' ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಬೇಕು. ಅದರ ನಂತರ ಸಬ್ಸಿಡಿ ಹಣ 30 ದಿನಗಳಲ್ಲಿ ನಿಮ್ಮ ಖಾತೆಗಳಿಗೆ ಜಮಾ ಆಗಲಿದೆ.