ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಉತ್ತರ ಪ್ರದೇಶದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಸುಳಿವನ್ನು ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ ನೀಡಿದ್ದಾರೆ. ಜಯಂತ್ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರು ಮೊಮ್ಮಗ. ಇಂದು ಕೇಂದ್ರ ಸರ್ಕಾರವು ಚರಣ್ ಸಿಂಗ್ ಅವರಿಗೆ ಭಾರತ ರತ್ನ ಘೋಷಿಸಿದೆ. ಇದಾದ ಕೆಲವೇ ಗಂಟೆಗಳಲ್ಲಿ ಈ ಬೆಳವಣಿಗೆ ನಡೆದಿದೆ.
2024ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಜೊತೆಗೆ ಆರ್‌ಎಲ್‌ಡಿ ಮೈತ್ರಿ ಮಾಡಿಕೊಳ್ಳುವ ನಿರ್ಧಾರ ಮಾಡಿತ್ತು. ಕೆಲವು ದಿನಗಳಿಂದ ಬಿಜೆಪಿ ಜೊತೆಗೆ ಹೋಗುವ ವರದಿಗಳು ಬಂದಿದ್ದವು. ಇದರ ನಡುವೆ ಪ್ರಧಾನಿ ಮೋದಿ, ಜಯಂತ್ ಚೌಧರಿ ಅವರ ಅಜ್ಜ, ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿದ್ದಾರೆ.
ಈ ಬಗ್ಗೆ ಜಯಂತ್ ಚೌಧರಿ ಸಂತಸ ವ್ಯಕ್ತಪಡಿಸಿದರು. ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಸಿಹಿ ಹಂಚಿ ಖುಷಿ ಹಂಚಿಕೊಂಡಿದ್ದಾರೆ. ಇದೇ ವೇಳೆ, ಪ್ರಧಾನಿ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿರುವ ಚೌಧರಿ, ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿಯೊಂದಿಗೆ ಮೈತ್ರಿಯ ಸುಳಿವು ನೀಡಿದ್ದಾರೆ. ''ಹಿಂದಿನ ಸರ್ಕಾರಗಳು ಇಂದಿನವರೆಗೂ ಮಾಡಲಾಗದ್ದನ್ನು ಪ್ರಧಾನಿ ಮೋದಿ ತಮ್ಮ ದೂರದೃಷ್ಟಿಯಿಂದ ಪೂರ್ಣಗೊಳಿಸಿದ್ದಾರೆ. ಮುಖ್ಯವಾಹಿನಿಯಿಂದ ದೂರ ಉಳಿದ ಜನರನ್ನು ಪ್ರೋತ್ಸಾಹಿಸುತ್ತಿರುವ ಮೋದಿ ಸರ್ಕಾರಕ್ಕೆ ಮತ್ತೊಮ್ಮೆ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ'' ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಸ್ವಾಮಿನಾಥನ್, ಮಾಜಿ ಪ್ರಧಾನಿಗಳಾದ ನರಸಿಂಹರಾವ್, ಚರಣ್ ಸಿಂಗ್ಗೆ ಭಾರತ ರತ್ನದ ಗರಿ