ಕರ್ನಾಟಕ

karnataka

ETV Bharat / bharat

ಲಾಡ್ಕಿ ಬಹಿಣ್ ಯೋಜನೆಯಡಿ ನೋಂದಣಿ ಸೆಪ್ಟೆಂಬರ್​ನಲ್ಲೂ ಮುಂದುವರಿಕೆ: ಸಚಿವೆ ಅದಿತಿ ತಟ್ಕರೆ - Ladki Bahin Scheme - LADKI BAHIN SCHEME

ಲಾಡ್ಕಿ ಬಹಿಣ್​ ಯೋಜನೆಗಾಗಿ ಸೆಪ್ಟೆಂಬರ್​ ತಿಂಗಳಲ್ಲೂ ನೋಂದಣಿ ಮುಂದುವರಿಯಲಿದೆ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅದಿತಿ ತಟ್ಕರೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅದಿತಿ ತಟ್ಕರೆ (IANS)

By ETV Bharat Karnataka Team

Published : Sep 3, 2024, 1:52 PM IST

ಮುಂಬೈ: ಮಹಿಳೆಯರಿಗೆ ಪ್ರತಿ ತಿಂಗಳು 1,500 ರೂಪಾಯಿ ನೀಡುವ, ಮಹಾರಾಷ್ಟ್ರದ ಮಹಾಯುತಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ 'ಮುಖ್ಯಮಂತ್ರಿ ಮಾಝಿ ಲಾಡ್ಕಿ ಬಹಿಣ್ ಯೋಜನೆ' ಅಡಿಯಲ್ಲಿ ಸೆಪ್ಟೆಂಬರ್​ನಲ್ಲಿಯೂ ನೋಂದಣಿಗೆ ಅವಕಾಶ ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುನ್ನ ಮಹಿಳಾ ಮತದಾರರನ್ನು ತನ್ನತ್ತ ಸೆಳೆಯುವ ಪ್ರಯತ್ನವಾಗಿ ರಾಜ್ಯ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ರಾಜ್ಯ ಸರ್ಕಾರವು ಈಗಾಗಲೇ ಈ ಯೋಜನೆಯಡಿ ಜುಲೈನಿಂದ ಸುಮಾರು 1.60 ಕೋಟಿ ಅರ್ಹ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಮಾಸಿಕ 1,500 ರೂ.ಗಳ ಆರ್ಥಿಕ ಸಹಾಯವನ್ನು ನೇರವಾಗಿ ಜಮಾ ಮಾಡಿದೆ. ಆದರೆ ಈವರೆಗೂ ಯೋಜನೆಗೆ ನೋಂದಾಯಿಸಿಕೊಳ್ಳದ ಮಹಿಳೆಯರಿಗೆ ಮತ್ತೊಂದು ಅವಕಾಶ ನೀಡಲು ನೋಂದಣಿ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಸರ್ಕಾರ ಹೇಳಿದೆ.

"ಮುಖ್ಯಮಂತ್ರಿ ಮಾಝಿ ಲಾಡ್ಕಿ ಬಹಿಣ್ ಯೋಜನೆ ಅಡಿಯಲ್ಲಿ ರಾಜ್ಯದ ಎಲ್ಲಾ ಅರ್ಹ ಮಹಿಳಾ ಫಲಾನುಭವಿಗಳು ಸೆಪ್ಟೆಂಬರ್​ನಲ್ಲಿಯೂ ನೋಂದಾಯಿಸಿಕೊಳ್ಳಬಹುದು. ಈ ಯೋಜನೆಯಡಿ ನೋಂದಣಿಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಅಗತ್ಯ ಸೂಚನೆಗಳನ್ನು ನೀಡಲಾಗುವುದು" ಎಂದು ಸರ್ಕಾರದ ಹೊಸ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ (ಡಬ್ಲ್ಯುಸಿಡಿ) ಸಚಿವೆ ಅದಿತಿ ತಟ್ಕರೆ ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದು, "ಮುಖ್ಯಮಂತ್ರಿ ಮಾಝಿ ಲಾಡ್ಕಿ ಬಹಿಣ್ ಯೋಜನೆಯ ಮಹಿಳಾ ಸಬಲೀಕರಣದ ಕ್ರಾಂತಿ ಮುಂದುವರಿಯಲಿದೆ. ಈ ಯೋಜನೆಗಾಗಿ ನೋಂದಣಿಯು ಸೆಪ್ಟೆಂಬರ್ ತಿಂಗಳಲ್ಲಿಯೂ ಮುಂದುವರಿಯುತ್ತದೆ. ಲಾಡ್ಕಿ ಬಹಿಣ್ ಯೋಜನೆಗೆ ನೋಂದಾಯಿಸಿಕೊಳ್ಳದ ಸಹೋದರಿಯರು ಆದಷ್ಟು ಬೇಗ ನೋಂದಾಯಿಸಿಕೊಳ್ಳಬೇಕು. ಬದಲಾವಣೆಗೆ ಕಾಯಬೇಡಿ, ನೀವೇ ಬದಲಾವಣೆಯ ವಾಸ್ತುಶಿಲ್ಪಿಯಾಗಿ. ಮುಖ್ಯಮಂತ್ರಿ ಮಾಝಿ ಲಾಡ್ಕಿ ಬಹಿಣ್ ಯೋಜನೆಯಲ್ಲಿ ಪಾಲ್ಗೊಳ್ಳಿ." ಎಂದು ಬರೆದಿದ್ದಾರೆ.

ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನ ಲಾಡ್ಕಿ ಬಹಿಣ್ ಯೋಜನೆಯಡಿ ಸುಮಾರು 1.60 ಕೋಟಿ ಅರ್ಹ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಸರ್ಕಾರ ಇದುವರೆಗೆ 4,787 ಕೋಟಿ ರೂ.ಗಳನ್ನು ಜಮಾ ಮಾಡಿದೆ ಎಂದು ನಾಗ್ಪುರದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದರು.

ಮುಂಬರುವ ವಿಧಾನಸಭಾ ಚುನಾವಣೆಯ ನಂತರ ಮಹಾಯುತಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಮಾಸಿಕ ಆರ್ಥಿಕ ಸಹಾಯವನ್ನು 3000 ರೂ.ಗೆ ಹೆಚ್ಚಿಸುವುದಾಗಿ ಶಿಂಧೆ ಘೋಷಿಸಿದ್ದಾರೆ. ಅಜಿತ್ ಪವಾರ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಲಾಡ್ಕಿ ಬಹಿಣ್ ಯೋಜನೆಯಡಿ ಮುಂದಿನ ಐದು ವರ್ಷಗಳಲ್ಲಿ ಅರ್ಹ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಸರ್ಕಾರ 1 ಲಕ್ಷ ರೂ.ಗಳನ್ನು ಜಮಾ ಮಾಡಲಿದೆ ಎಂದು ಹೇಳಿದರು.

ಇದನ್ನೂ ಓದಿ: ಉತ್ತಮ ಮುಂಗಾರು: ಭತ್ತ, ಧಾನ್ಯ, ಕಬ್ಬು ಬಿತ್ತನೆ ಪ್ರಮಾಣ ಹೆಚ್ಚಳ - Monsoon Boosts Paddy Sowing

ABOUT THE AUTHOR

...view details