ರಾಂಚಿ (ಜಾರ್ಖಂಡ್): ಬಾಂಗ್ಲಾದೇಶದಲ್ಲಿ ತೀವ್ರ ರಾಜಕೀಯ ಬಿಕ್ಕಟ್ಟು ಉಂಟಾಗಿರುವ ಮಧ್ಯೆ ರಾಂಚಿಯ ವ್ಯಕ್ತಿಯೊಬ್ಬರು ತಮ್ಮ ಕುಟುಂಬದೊಂದಿಗೆ ಅಲ್ಲಿಯೇ ಸಿಲುಕಿ ಭಾರತಕ್ಕೆ ಬರಲಾಗದೇ ಪರದಾಡುತ್ತಿದ್ದಾರೆ. ರಾಂಚಿ ನಿವಾಸಿ ಮನೀಶ್ ಎಂಬುವರು ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಬಾಂಗ್ಲಾದೇಶದಲ್ಲಿ ಸಿಲುಕಿಕೊಂಡಿದ್ದಾರೆ. ಮನೀಶ್ ಚೌಧರಿ ರಾಂಚಿ ನಿವಾಸಿಯಾಗಿದ್ದು, ಪ್ರಸ್ತುತ ಬಾಂಗ್ಲಾದೇಶದಲ್ಲಿನ ಖಾಸಗಿ ಕಂಪನಿಯೊಂದರ ಪ್ರಾಜೆಕ್ಟ್ನಲ್ಲಿ ಕೆಲಸ ಮಾಡುತ್ತಿದ್ದಾರೆ.
ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಮನೀಶ್ ಚೌಧರಿ ಬಾಂಗ್ಲಾದೇಶದ ರಂಗ್ಪುರದಲ್ಲಿ ಖಾಸಗಿ ಕಂಪನಿಯ ಪ್ರಾಜೆಕ್ಟ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ರಂಗ್ಪುರದ ಟೋಲ್ ಪಾಕರ್ ಮಠ ಎಂಬ ಪ್ರದೇಶದಲ್ಲಿ ವಾಸವಾಗಿದ್ದಾರೆ. ಭಾರತದಲ್ಲಿನ ತಮ್ಮ ಸ್ನೇಹಿತರೊಂದಿಗೆ ದೂರವಾಣಿಯ ಮೂಲಕ ಮಾತನಾಡಿರುವ ಮನೀಷ್, ಬಾಂಗ್ಲಾದೇಶದಲ್ಲಿನ ಬಿಕ್ಕಟ್ಟಿನ ಬಗ್ಗೆ ತಿಳಿಸಿದ್ದಾರೆ.
ಆದಾಗ್ಯೂ, ತಾನು ಕೆಲಸ ಮಾಡುತ್ತಿರುವ ಪ್ರದೇಶದಲ್ಲಿ ಅಂಥ ಅಪಾಯವೇನೂ ಕಂಡುಬಂದಿಲ್ಲ ಎಂದು ಅವರು ಹೇಳಿದ್ದಾರೆ. ರಂಗ್ಪುರದ ಖಾಸಗಿ ಕಂಪನಿಯ ಪ್ರಾಜೆಕ್ಟ್ನಲ್ಲಿ 150 ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದು, ಇವರೆಲ್ಲರೂ ಭಾರತೀಯರಾಗಿದ್ದಾರೆ. ಆದರೆ ಸದ್ಯ ಬಾಂಗ್ಲಾದೇಶದ ಪರಿಸ್ಥಿತಿಯನ್ನು ನೋಡಿ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ ಮತ್ತು ಆದಷ್ಟು ಬೇಗ ಎಲ್ಲರೂ ತಾಯ್ನಾಡಿಗೆ ಹಿಂತಿರುಗಲು ಬಯಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಮನೀಶ್ ಕಳೆದ ಎರಡು ವರ್ಷಗಳಿಂದ ಪತ್ನಿ ಮತ್ತು ಮಗುವಿನೊಂದಿಗೆ ಬಾಂಗ್ಲಾದೇಶದಲ್ಲಿದ್ದಾರೆ.