ನವದೆಹಲಿ: ಅಯೋಧ್ಯೆಯ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನಾ ಸಮಾರಂಭವು ಕೋಟ್ಯಂತರ ಭಾರತೀಯರನ್ನು ಒಟ್ಟುಗೂಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ. ಕಾರ್ಯಕ್ರಮ ನಡೆದ ಸಮಯದಲ್ಲಿ ದೇಶದ ಸಾಮೂಹಿಕ ಶಕ್ತಿ ಜಗತ್ತಿಗೆ ಗೋಚರವಾಗಿದೆ ಎಂದು ಅವರು ಪ್ರತಿಪಾದಿಸಿದರು.
ಈ ವರ್ಷದ ಮೊದಲ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಗವಾನ್ ರಾಮನ ಆಡಳಿತವು ಸಂವಿಧಾನ ರಚನಾಕಾರರಿಗೆ ಸ್ಫೂರ್ತಿಯ ಮೂಲವಾಗಿದೆ. ಅದಕ್ಕಾಗಿಯೇ ಜನವರಿ 22 ರಂದು ಅಯೋಧ್ಯೆಯಲ್ಲಿ ನಾನು 'ದೇವ್ ಟು ದೇಶ್' ಮತ್ತು 'ರಾಮ್ ಟು ರಾಷ್ಟ್ರ' ಬಗ್ಗೆ ಮಾತನಾಡಿದ್ದೆ ಎಂದು ಅವರು ನುಡಿದರು.
"ಎಲ್ಲರ ಭಾವನೆ ಒಂದೇ, ಎಲ್ಲರ ಭಕ್ತಿ ಒಂದೇ. ರಾಮ ಎಲ್ಲರ ಮಾತಲ್ಲಿದ್ದಾನೆ, ರಾಮ ಎಲ್ಲರ ಹೃದಯದಲ್ಲೂ ಇದ್ದಾನೆ. ಪ್ರಾಣ ಪ್ರತಿಷ್ಠಾಪನೆಯ ಅವಧಿಯಲ್ಲಿ ಅನೇಕ ಜನ ರಾಮ ಭಜನೆಗಳನ್ನು ಹಾಡಿ ಅವುಗಳನ್ನು ಭಗವಾನ್ ರಾಮನಿಗೆ ಅರ್ಪಿಸಿದರು. ಜನವರಿ 22 ರಂದು ಸಂಜೆ ಇಡೀ ದೇಶವು 'ರಾಮ್ ಜ್ಯೋತಿ' ಬೆಳಗಿಸಿ ದೀಪಾವಳಿ ಆಚರಿಸಿತು" ಎಂದು ಅವರು ಹೇಳಿದರು.
"ನಾಳೆ 29 ರಂದು ಬೆಳಿಗ್ಗೆ 11 ಗಂಟೆಗೆ ನಾನು ಪರೀಕ್ಷಾ ಪೇ ಚರ್ಚಾ ಸಂವಾದ ನಡೆಸಲಿದ್ದೇನೆ. ಇದು ಪರೀಕ್ಷಾ ಪೇ ಚರ್ಚಾದ 7ನೇ ಆವೃತ್ತಿಯಾಗಿದೆ. ಈ ಕಾರ್ಯಕ್ರಮಕ್ಕಾಗಿ ನಾನು ಯಾವಾಗಲೂ ಕಾಯುತ್ತಿರುತ್ತೇನೆ. ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಲು ಇದು ನನಗೆ ಅವಕಾಶ ನೀಡುತ್ತದೆ ಮತ್ತು ಪರೀಕ್ಷೆಗೆ ಸಂಬಂಧಿಸಿದ ಅವರ ಒತ್ತಡವನ್ನು ಕಡಿಮೆ ಮಾಡಲು ನಾನು ಪ್ರಯತ್ನಿಸುತ್ತೇನೆ." ಎಂದು ಪ್ರಧಾನಿ ಮೋದಿ ತಿಳಿಸಿದರು.