ಹೈದರಾಬಾದ್:ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ರಾಮೋಜಿ ರಾವ್ (87) ಅವರು ಶನಿವಾರ ಮುಂಜಾನೆ ನಿಧನ ಹೊಂದಿದ್ದಾರೆ. ಇತ್ತೀಚೆಗಷ್ಟೇ ಆರೋಗ್ಯ ಸಮಸ್ಯೆಯಿಂದಾಗಿ ಹೈದರಾಬಾದ್‌ನ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.
ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಇದೇ 5ರಂದು ಆಸ್ಪತ್ರೆಗೆ ದಾಖಲಾಗಿದ್ದ ಶ್ರೀ ರಾವ್ ಅವರು ಶನಿವಾರ ಬೆಳಗಿನ ಜಾವ 4:50ಕ್ಕೆ ನಿಧನರಾದರು. ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾಮೋಜಿ ರಾವ್ ಅವರ ಪಾರ್ಥಿವ ಶರೀರವನ್ನು ರಾಮೋಜಿ ಫಿಲ್ಮ್ ಸಿಟಿಯಲ್ಲಿರುವ ಕಚೇರಿಗೆ ಕರೆತರಲಾಗಿದೆ. ಅಲ್ಲಿ ಕುಟುಂಬ, ಸ್ನೇಹಿತರು, ಗಣ್ಯರು ಮತ್ತು ಹಿತೈಷಿಗಳು ಅಗಲಿದ ಚೇತನಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ.
ರಾಮೋಜಿ ರಾವ್ ಅವರು 1936ರ ನವೆಂಬರ್ 16 ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೆದಪರುಪುಡಿಯಲ್ಲಿ ಜನಿಸಿದ್ದರು. ರೈತನ ಮಗನಾಗಿ ಹುಟ್ಟಿ ಬೆಳೆದ ಅವರು ಯಶಸ್ವಿ ಉದ್ಯಮಿಯಾಗಿ, ಮಾಧ್ಯಮ ಸಾಮ್ರಾಜ್ಯವನ್ನೇ ಕಟ್ಟಿ ಬೆಳೆಸಿದವರು.
1969ರಲ್ಲಿ ಅನ್ನದಾತ ಪತ್ರಿಕೆ ಆರಂಭಿಸುವ ಮೂಲಕ ಅವರು ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟರು. ಬಳಿಕ ಈನಾಡು ದಿನಪತ್ರಿಕೆ ಮೂಲಕ ತೆಲುಗು ಪತ್ರಿಕಾ ಲೋಕದಲ್ಲಿ ಕ್ರಾಂತಿ ಹುಟ್ಟು ಹಾಕಿದರು. 10 ಆಗಸ್ಟ್, 1974 ರಂದು ವಿಶಾಖಪಟ್ಟಣಂನಲ್ಲಿ ಈನಾಡು ಪತ್ರಿಕೆ ಆರಂಭಿಸಿದ್ದರು. ತೆಲುಗು ಪತ್ರಿಕೋದ್ಯಮ ಲೋಕದಲ್ಲಿ 'ಈನಾಡು' ಹೊಸ ಯುಗಕ್ಕೆ ನಾಂದಿ ಹಾಡಿತು. ಕೆಲ ವರ್ಷಗಳಲ್ಲಿಯೇ ಓದುಗರ ಮೆಚ್ಚುಗೆಗೆ ಪಾತ್ರವಾಯಿತು.
ಬಳಿಕ 'ಈಟಿವಿ' ಸುದ್ದಿ ವಾಹಿನಿ ಮೂಲಕ ಮಾಧ್ಯಮ ಜಗತ್ತಿನಲ್ಲಿ ದಿಗ್ಗಜರಾಗಿ ಪ್ರಖ್ಯಾತರಾದರು. 1995ರ ಆಗಸ್ಟ್ 27ರಂದು 'ಈಟಿವಿ ತೆಲುಗು' ಪ್ರಾರಂಭವಾಯಿತು. ವೈವಿಧ್ಯ,ಮಯ ಮನರಂಜನೆ ನೀಡುವ ಮೂಲಕ ತೆಲುಗಿನಲ್ಲಿ ಇಂದಿಗೂ ಮನೆ ಮಾತಾಗಿದೆ. ತೆಲುಗಿನ ಮೊದಲ 24 ಗಂಟೆಗಳ ಚಾನೆಲ್ ಆಗಿ ಇದು ಆರಂಭವಾಯಿತು.