ಕರ್ನಾಟಕ

karnataka

2ನೇ ಹಂತದ ಮತದಾನಕ್ಕೂ ಮುನ್ನ ಇಂದು ಜಮ್ಮು ಕಾಶ್ಮೀರದಲ್ಲಿ ರಾಹುಲ್​ ಗಾಂಧಿ ಪ್ರಚಾರ - Rahul Gandhi Election Campaign

By ETV Bharat Karnataka Team

Published : 4 hours ago

ಪೂಂಚ್​ನ ಸುರನ್ಕೊಟೆ ಮತ್ತು ಶ್ರೀನಗರದ ಶಾಲ್ತೆಂಗ್​ನಲ್ಲಿ ತಮ್ಮ ಅಭ್ಯರ್ಥಿಗಳ ಪರವಾಗಿ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಇಂದು ಮತಬೇಟೆ ನಡೆಸಲಿದ್ದಾರೆ.

Rahul Gandhi hold Two Campaign Rallies In J and K Today
ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ (ANI)

ಶ್ರೀನಗರ: ಎರಡನೇ ಹಂತದ ಮತದಾನಕ್ಕೆ ಸಜ್ಜಾಗಿರುವ ಜಮ್ಮು ಮತ್ತು ಕಾಶ್ಮೀರದ ಕ್ಷೇತ್ರಗಳಲ್ಲಿ ಇಂದು ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿ ಪ್ರಚಾರ ಸಭೆ ನಡೆಸುವರು. ಮಧ್ಯಾಹ್ನ 12ಕ್ಕೆ ಪೂಂಚ್​ನ ಸುರನ್ಕೊಟೆ ಮತ್ತು 1.30ಕ್ಕೆ ಶ್ರೀನಗರ ಶಾಲ್ತೆಂಗ್​ನಲ್ಲಿ ಅಭ್ಯರ್ಥಿಗಳ ಪರ ಅವರು ಮತಯಾಚಿಸುವರು.

ಸೋಮವಾರ ರಾತ್ರಿ ರಾಹುಲ್ ಚಾರ್ಟೆಡ್​ ವಿಮಾನದ ಮೂಲಕ ಶ್ರೀನಗರಕ್ಕೆ ಆಗಮಿಸಿದ್ದು, ಅಲ್ಲಿಂದ ಹೆಲಿಕಾಪ್ಟರ್​ ಮೂಲಕ ಸುರನ್ಕೋಟೆಗೆ ಆಗಮಿಸಿ ವಾಸ್ತವ್ಯ ಹೂಡಿದ್ದಾರೆ. ಸುರನ್ಕೋಟೆ ಸಮಾವೇಶದ ಬಳಿಕ ಹೆಲಿಕ್ಯಾಪ್ಟರ್​ ಮೂಲಕ ಶ್ರೀನಗರಕ್ಕೆ ಆಗಮಿಸಲಿದ್ದಾರೆ. ಶ್ರೀನಗರ ಜಿಲ್ಲೆಯ ಸೆಂಟ್ರಲ್ ಶಾಲ್ತೆಂಗ್ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಮೊಹದ್​ ಸಲೀಂ ಖಾನ್​ ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಪ್ರದೇಶ್​ ಕಾಂಗ್ರೆಸ್​ ಸಮಿತಿ (ಜೆಕೆಪಿಸಿಸಿ) ಮುಖ್ಯಸ್ಥ ತಾರೀಖ್​ ಹಮೀದ್​ ಕರ್ರಾ ಶಾಲ್ತೆಂಗ್​ನಿಂದ ಕಣಕ್ಕಿಳಿಯುತ್ತಿದ್ದು, ಅವರ ಪರ ರಾಹುಲ್​ ಮತ ಪ್ರಚಾರ ನಡೆಸಲಿದ್ದಾರೆ.

ನ್ಯಾಶನಲ್ ಕಾನ್ಫರೆನ್ಸ್ (ಎನ್​ಸಿ) ಮತ್ತು ಕಾಂಗ್ರೆಸ್ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿದ್ದು, ದಶಕಗಳ ಬಳಿಕ ನಡೆಯುತ್ತಿರುವ ಚುನಾವಣೆಯಲ್ಲಿ ಎನ್​ಸಿ 52 ಸ್ಥಾನ ಮತ್ತು ಕಾಂಗ್ರೆಸ್​ 31 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಇನ್ನುಳಿದ ಎರಡು ಸ್ಥಾನವನ್ನು ಸಿಪಿಐ (ಎಂ) ಮತ್ತು ಜಮ್ಮುವಿನಲ್ಲಿ ಮತ್ತೊಂದು ಕ್ಷೇತ್ರವನ್ನು ಪ್ಯಾಂಥರ್ಸ್ ಪಕ್ಷಕ್ಕೆ ಬಿಟ್ಟುಕೊಟ್ಟಿದೆ.

ಆದಾಗ್ಯೂ, ಎರಡೂ ಪಕ್ಷಗಳು ಐದು ಕ್ಷೇತ್ರದಲ್ಲಿ ಸ್ಪರ್ಧೆಗೆ ಒಮ್ಮತ ಹೊಂದಿಲ್ಲದ ಕಾರಣ ಬನಿಹಾಲ್, ನಗ್ರೋಟಾ, ಕಿಶ್ತ್ವಾರ್ ಮತ್ತು ದೋಡಾ, ಸೋಪೋರ್​ನಲ್ಲಿ ಸೌಹಾರ್ದಯುತ ಸ್ಪರ್ಧೆಗೆ ಮುಂದಾಗಿವೆ.

ಸೆಪ್ಟಂಬರ್​ 25ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಅಕ್ಟೋಬರ್​ 1ರಂದು ಕಡೇಯ ಹಾಗೂ ಮೂರನೇ ಹಂತದ ಮತದಾನಕ್ಕೆ ಸಿದ್ಧತೆ ನಡೆದಿದೆ. ಅಕ್ಟೋಬರ್​ 8ರಂದು ಮತ ಎಣಿಕೆ ಕಾರ್ಯ ನಡೆದು ಫಲಿತಾಂಶ ಹೊರಬೀಳಲಿದೆ.

ಇದನ್ನೂ ಓದಿ: J&K ಚುನಾವಣೆ : ಬಿಜೆಪಿಯ ಚುನಾವಣಾ ಪ್ರಣಾಳಿಕೆಯನ್ನು 'ಜುಮ್ಲಾ ಪತ್ರ' ಎಂದು ಕರೆದ ಕಾಂಗ್ರೆಸ್

ABOUT THE AUTHOR

...view details