ಕರ್ನಾಟಕ

karnataka

ಭೂಕುಸಿತ: ಪರಿಸ್ಥಿತಿ ಅವಲೋಕಿಸಲು ವಯನಾಡಿ​ಗೆ ರಾಹುಲ್, ಪ್ರಿಯಾಂಕಾ ಗಾಂಧಿ - Wayanad Landslide

By ANI

Published : Aug 1, 2024, 10:52 AM IST

ಕೇರಳದ ವಯನಾಡ್‌ ಜಿಲ್ಲೆಯಲ್ಲಿ ಉಂಟಾದ ಭೀಕರ ಭೂಕುಸಿತ ಉಂಟಾಗಿ ಸಾಕಷ್ಟು ಸಾವು, ನೋವು ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್​ ಗಾಂಧಿ, ಪ್ರಿಯಾಂಕಾ ಗಾಂಧಿ ಪರಿಸ್ಥಿತಿ ಅವಲೋಕಿಸಲಿದ್ದಾರೆ.

ವಯನಾಡ್​ನಲ್ಲಿ ರಾಹುಲ್​ ಗಾಂಧಿ, ಪ್ರಿಯಾಂಕಾ ಗಾಂಧಿ ಭೂಕುಸಿತ ಪರಿಸ್ಥಿತಿ ಅವಲೋಕಿಸಲಿದ್ದಾರೆ.
ವಯನಾಡ್​ನಲ್ಲಿ ರಾಹುಲ್​ ಗಾಂಧಿ, ಪ್ರಿಯಾಂಕಾ ಗಾಂಧಿ ಭೂಕುಸಿತ ಪರಿಸ್ಥಿತಿ ಅವಲೋಕಿಸಲಿದ್ದಾರೆ. (IANS)

ನವದೆಹಲಿ:ಕೇರಳದ ವಯನಾಡ್‌ ಜಿಲ್ಲೆಯಲ್ಲಿ ಉಂಟಾದ ಭೀಕರ ಭೂಕುಸಿತದ ಪರಿಸ್ಥಿತಿ ಅವಲೋಕಿಸಲು ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ವಯನಾಡ್​ಗೆ ಇಂದು ಭೇಟಿ ನೀಡಲಿದ್ದಾರೆ. ದೆಹಲಿಯಿಂದ ವಿಮಾನದಲ್ಲಿ ರಾಹುಲ್​, ಪ್ರಿಯಾಂಕಾ ಇಬ್ಬರೂ ಈಗಾಗಲೇ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ಧಾರೆ.

ಮುಂಡಕ್ಕೈ ಮತ್ತು ಚೂರಲ್ಮಲಾ ಸೇರಿ ನಾಲ್ಕು ಗ್ರಾಮದಲ್ಲಿ ಸೋಮವಾರ-ಮಂಗಳವಾರ ರಾತ್ರಿ ಸರಣಿ ಭಾರಿ ಭೂಕುಸಿತಗಳು ಸಂಭವಿಸಿವೆ. ಇದರಲ್ಲಿ ಮೃತರ ಸಂಖ್ಯೆ 250ರ ಗಡಿ ತಲುಪಿದೆ. ವಯನಾಡ್‌ ಜಿಲ್ಲಾಡಳಿತವು ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ 173 ಜನರ ಸಾವಿನ ಬಗ್ಗೆ ಖಚಿತ ಪಡಿಸಿದೆ. ಮೂರು ದಿನಗಳಿಂದ ನಿರಂತರವಾಗಿ ಪರಿಹಾರ ಹಾಗೂ ರಕ್ಷಣಾ ಕಾರ್ಯದಲ್ಲಿ ಭಾರತೀಯ ಸೇನೆ, ಎನ್​ಡಿಆರ್​ಎಫ್​, ಎಸ್​ಡಿಆರ್​ಎಫ್​ ಸೇರಿ ಇತರ ತಂಡಗಳು ತೊಡಗಿದೆ. ಕಾಂಗ್ರೆಸ್ ನಾಯಕರಾದ​ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಬುಧವಾರವೇ ವಯನಾಡ್‌ಗೆ ಭೇಟಿ ನೀಡುವ ನಿರ್ಧಾರ ಮಾಡಿದ್ದರು. ಆದರೆ, ನಿರಂತರ ಮಳೆ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ತಮ್ಮ ಭೇಟಿಯನ್ನು ಇಂದಿಗೆ ಮುಂದೂಡಿದ್ದರು.

ಭೂಕುಸಿತ: ಪರಿಸ್ಥಿತಿ ಅವಲೋಕಿಸಲು ವಯನಾಡಿ​ಗೆ ರಾಹುಲ್, ಪ್ರಿಯಾಂಕಾ ಗಾಂಧಿ (ANI)

ಭೂಕುಸಿತದಿಂದ ಹಾನಿಗೊಳಗಾದ ಕುಟುಂಬಗಳನ್ನು ಭೇಟಿ ಮಾಡಲು ಮತ್ತು ಪರಿಸ್ಥಿತಿಯನ್ನು ಅವಲೋಕಿಸಲು ಪ್ರಿಯಾಂಕಾ ಮತ್ತು ನಾನು ನಾಳೆ ವಯನಾಡ್‌ಗೆ ಭೇಟಿ ನೀಡಬೇಕಿತ್ತು. ಆದರೆ, ಎಡೆಬಿಡದೆ ಸುರಿಯುತ್ತಿರುವ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾವು ಆದಷ್ಟು ಬೇಗ ಭೇಟಿ ನೀಡುತ್ತೇವೆ ಎಂದು ನಾನು ವಯನಾಡ್ ಜನರಿಗೆ ಭರವಸೆ ನೀಡಲು ಬಯಸುತ್ತೇನೆ. ಈ ಮಧ್ಯೆ ನಾವು ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತೇವೆ. ಅಗತ್ಯವಿರುವ ಎಲ್ಲ ಸಹಾಯವನ್ನು ಒದಗಿಸುತ್ತೇವೆ. ಈ ಕಷ್ಟದ ಸಮಯದಲ್ಲಿ ನಮ್ಮ ಆಲೋಚನೆಗಳು ವಯನಾಡ್ ಜನರೊಂದಿಗೆ ಇವೆ ಎಂದು ರಾಹುಲ್ ಗಾಂಧಿ ಜುಲೈ 30ರಂದು ಸಾಮಾಜಿಕ ಜಾಲತಾಣ 'ಎಕ್ಸ್‌'ನಲ್ಲಿ ಪೋಸ್ಟ್ ಮಾಡಿದ್ದರು.

100ಕ್ಕೂ ಹೆಚ್ಚು ಮೃತದೇಹಗಳು ಪತ್ತೆ:ಮತ್ತೊಂದೆಡೆ,ಭೂಕುಸಿತದಲ್ಲಿ ಒಟ್ಟಾರೆ ಮೃತರ ಪೈಕಿ 100ಕ್ಕೂ ಹೆಚ್ಚು ಮೃತದೇಹಗಳನ್ನು ಪತ್ತೆ ಹೆಚ್ಚಲಾಗಿದೆ. 500ಕ್ಕೂ ಹೆಚ್ಚು ಸೇನಾ ಸಿಬ್ಬಂದಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಕರ್ನಾಟಕ ಮತ್ತು ಕೇರಳ ಉಪ ಪ್ರದೇಶದ ಜನರಲ್ ಆಫೀಸರ್ ಕಮಾಂಡಿಂಗ್ ಮೇಜರ್ ಜನರಲ್ ವಿ.ಟಿ.ಮ್ಯಾಥ್ಯೂ ತಿಳಿಸಿದ್ದಾರೆ.

ಜುಲೈ 30ರ ಬೆಳಗ್ಗೆಯಿಂದಲೂ ಪರಿಹಾರ ಕಾರ್ಯದಲ್ಲಿ ತೊಡಗಲಾಗಿದೆ. ಇದುವರೆಗೆ ನಾವು 100ಕ್ಕೂ ಅಧಿಕ ಶವಗಳನ್ನು ಪತ್ತೆ ಮಾಡಿದ್ದೇವೆ. ಒಟ್ಟಾರೆ ಸಾವಿನ ಇನ್ನೂ ಅಧಿಕವಾಗಿದೆ. ಇದೇ ವೇಳೆ, ನೂರಾರು ಜನರನ್ನು ರಕ್ಷಣೆ ಮಾಡಿದೆ. ಮುಂಡಕ್ಕೈ, ಚೂರಲ್ಮಲಾ ಬಳಿ ತಾತ್ಕಾಲಿಕ ಸೇತುವೆ ನಿರ್ಮಾಣ ಕಾರ್ಯ ಇಂದು ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದ್ಧಾರೆ.

ಇದೇ ವೇಳೆ, ಕೇಂದ್ರ ಸಚಿವ ಜಾರ್ಜ್ ಕುರಿಯನ್ ಕೂಡ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ತಮ್ಮನ್ನು ಪ್ರಧಾನಿ ಮೋದಿ ಅವರು ಕಳುಹಿಸಿದ್ದಾರೆ. ಸೇನೆ ಮತ್ತು ಎನ್‌ಡಿಆರ್‌ಎಫ್‌ನ ಹಲವಾರು ತಂಡಗಳು ಮತ್ತು ಡಿಎಸ್‌ಇಯ ಎರಡು ತಂಡಗಳು ಈಗಾಗಲೇ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ನೌಕಾಪಡೆಯ ಒಂದು ಹೆಲಿಕಾಪ್ಟರ್ ಸೇರಿದಂತೆ ಸೇನೆ ಮತ್ತು ವಾಯುಪಡೆಗಳ ತಮ್ಮ ಆರು ಹೆಲಿಕಾಪ್ಟರ್‌ಗಳನ್ನು ಪರಿಹಾರ, ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ:ವಯನಾಡ್ ಭೂಕುಸಿತ; 22 ಮಕ್ಕಳು ಸೇರಿ 243 ಮಂದಿ ಸಾವು; ರಕ್ಷಣಾ ಕಾರ್ಯಕ್ಕೆ ತಾತ್ಕಾಲಿಕ ಬೈಲಿ ಸೇತುವೆ ನಿರ್ಮಿಸಿದ ಸೇನೆ

ABOUT THE AUTHOR

...view details