ಬೆಳಗಾವಿ: "ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ" ಎಂದು ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಪುಣೆ-ಹುಬ್ಬಳ್ಳಿ ನಡುವಿನ ವಂದೇ ಭಾರತ್ ರೈಲನ್ನು ಸ್ವಾಗತಿಸಲು ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
"ಕೊಂಕಣ ರೈಲ್ವೆ ಜಾಲ ಕೇರಳದಿಂದ ಮಹಾರಾಷ್ಟ್ರದವರೆಗೆ ವಿಸ್ತರಿಸಿದೆ. ಹಾಗಾಗಿ, ಪ್ರಯಾಣಿಕರಿಗೆ ಇನ್ನೂ ಉತ್ತಮ ಸೇವೆ ಕಲ್ಪಿಸುವ ಉದ್ದೇಶದಿಂದ ಇದನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವ ಆಲೋಚನೆ ಮಾಡುತ್ತಿದ್ದೇವೆ. ಆ ನಿಟ್ಟಿನಲ್ಲಿ ಕರ್ನಾಟಕ, ಕೇರಳ ಮತ್ತು ಗೋವಾ ಸರ್ಕಾರಗಳೊಂದಿಗೆ ಮಾತುಕತೆ ನಡೆಸಿದ್ದು, ಮಹಾರಾಷ್ಟ್ರಕ್ಕೆ ಮನವರಿಕೆ ಮಾಡಿಕೊಟ್ಟ ಬಳಿಕ ವಿಲೀನ ಪ್ರಕ್ರಿಯೆಯನ್ನು ಶುರು ಮಾಡಲಾಗುವುದು" ಎಂದರು.
ವಂದೇ ಭಾರತ್ಗೆ ಬೆಳಗಾವಿಯಲ್ಲಿ ಅದ್ಧೂರಿ ಸ್ವಾಗತ: ಪುಣೆಯಿಂದ ವಂದೇ ಭಾರತ್ ರೈಲು ಬೆಳಗಾವಿಗೆ ಬರುತ್ತಿದ್ದಂತೆ ಚಪ್ಪಾಳೆ ತಟ್ಟಿ ಕುಂದಾನಗರಿ ಬೆಳಗಾವಿ ಜನತೆ ಅದ್ಧೂರಿಯಾಗಿ ಸ್ವಾಗತಿಸಿದರು. ಜೈ ಶ್ರೀರಾಮ್, ಜೈ ಮೋದಿ ಎಂದು ಘೋಷಣೆ ಕೂಗಿ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು. ಸಚಿವ ವಿ.ಸೋಮಣ್ಣ, ಸಂಸದ ಜಗದೀಶ್ ಶೆಟ್ಟರ್, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮೇಯರ್ ಸವಿತಾ ಕಾಂಬಳೆ, ಮಾಜಿ ಸಂಸದೆ ಮಂಗಲ ಅಂಗಡಿ ಇದ್ದರು.
ಬಳಿಕ ವಂದೇ ಭಾರತ್ ರೈಲನ್ನು ವಿ.ಸೋಮಣ್ಣ ಹುಬ್ಬಳ್ಳಿಗೆ ಬೀಳ್ಕೊಟ್ಟರು. ಇದೇ ರೈಲಿನ ಲೋಕೋ ಪೈಲಟ್ ಪಕ್ಕದ ಸೀಟಿನಲ್ಲಿ ಕುಳಿತು ಸಂಸದ ಶೆಟ್ಟರ್ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದರು. ರೈಲು ಮೂರು ದಿನ ಪುಣೆಯಿಂದ ಹುಬ್ಬಳ್ಳಿಗೆ, ಹುಬ್ಬಳ್ಳಿಯಿಂದ ಪುಣೆಗೆ ಸಂಚಾರ ಮಾಡಲಿದೆ.
ರೈಲು ಪ್ರತಿ ಗುರುವಾರ, ಶನಿವಾರ, ಸೋಮವಾರ ಮಧ್ಯಾಹ್ನ 2.15ಕ್ಕೆ ಹೊರಟು ರಾತ್ರಿ 10.45ಕ್ಕೆ ಹುಬ್ಬಳ್ಳಿಗೆ ಬರಲಿದೆ. ಬುಧವಾರ, ಶುಕ್ರವಾರ, ಭಾನುವಾರ ಹುಬ್ಬಳ್ಳಿಯಿಂದ ಬೆಳಗ್ಗೆ 5ಕ್ಕೆ ಹೊರಟು ಮಧ್ಯಾಹ್ನ 1.30ಕ್ಕೆ ಪುಣೆಗೆ ಆಗಮಿಸಲಿದೆ.
ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ವಿ.ಸೋಮಣ್ಣ, "ಬೆಂಗಳೂರಿನಿಂದ ಬೆಳಗಾವಿಗೆ ವಂದೇ ಭಾರತ್ ಬರಬೇಕು ಎನ್ನುವುದು ನಮ್ಮ ಇಚ್ಛೆ. ಇದಕ್ಕಾಗಿ ಕಡಾಡಿಯವರು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಬೆಳಗಾವಿಗೂ ಸಹ ಬೆಳಗಾವಿಗೆ ವಂದೇ ಭಾರತ್ ಬರುತ್ತದೆ" ಎಂದರು.
ರೈಲು ತರಲು ತಾಂತ್ರಿಕ ಸಮಸ್ಯೆ ಇದೆ ಎಂಬ ಅಧಿಕಾರಿಗಳ ಸಬೂಬು ವಿಚಾರಕ್ಕೆ ಪ್ರತಿಕ್ರಿಯಿಸಿದ ವಿ.ಸೋಮಣ್ಣ, "ತಾಂತ್ರಿಕ ಸಮಸ್ಯೆ ಇದೆ ಅಂತ ನಾನು ಹೇಳಿಲ್ಲ. ಎಲ್ಲರೂ ನಮ್ಮ ಜೊತೆಗೆ ಇದ್ದಾರೆ. ಬೆಳಗಾವಿಗೆ ರೈಲು ಬರುತ್ತದೆ. ಪ್ರಲ್ಹಾದ ಜೋಶಿಯವರು ತಮ್ಮದೇ ಸಂಪರ್ಕ ಹೊಂದಿದ್ದಾರೆ. ಅವರಿಂದ ರಾಜ್ಯಕ್ಕೆ ಒಳ್ಳೆಯದೇ ಅಗುತ್ತದೆ. ಹತ್ತಾರು ರೈಲುಗಳು ಬೆಳಗಾವಿಗೆ ಬರುತ್ತವೆ. ನಿರ್ದಿಷ್ಟವಾಗಿ ಬೆಳಗಾವಿಗೆ ರೈಲು ಕೊಡುತ್ತೇವೆ" ಎಂದು ಭರವಸೆ ನೀಡಿದರು.
ಇದನ್ನೂ ಓದಿ: 18 ರಿಂದ ಹುಬ್ಬಳ್ಳಿ- ಪುಣೆ ವಂದೇ ಭಾರತ್ ಸಂಚಾರ ಆರಂಭ: ದರ ಎಷ್ಟು ಗೊತ್ತಾ? - Vande Bharat ticket rate