ಕಾರವಾರ: ಪೊಲೀಸ್ ಅಂದ್ರೆ ಅದೇನೋ ಭಯ. ಇದೇ ಕಾರಣಕ್ಕೆ ಕಣ್ಣೆದುರೇ ಕಾನೂನು ಉಲ್ಲಂಘನೆ ಕೃತ್ಯಗಳು ನಡೆಯುತ್ತಿದ್ದರೂ ಕೆಲವರು ತಮಗ್ಯಾಕೆ ಉಸಾಬರಿ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಇಂತಹವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತಮ್ಮ ಸುತ್ತಮುತ್ತಲಿನ ಅಪರಾಧಿ ಇಲ್ಲವೇ ಕಾನೂನು ಬಾಹಿರ ಚಟುವಟಿಕೆ ತಡೆಯಲು ಇದೀಗ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ 'ಪಬ್ಲಿಕ್ ಐ' ತಂತ್ರಜ್ಞಾನದ ಮೊರೆ ಹೋಗಿದ್ದು, ಮತ್ತಷ್ಟು ಜನಸ್ನೇಹಿಯಾಗುವ ಪ್ರಯತ್ನಕ್ಕೆ ಮುಂದಾಗಿದೆ.
ರಾಜ್ಯದಲ್ಲಿಯೇ ವಿಸ್ತಾರವಾದ ಜಿಲ್ಲೆಗಳಲ್ಲಿ ಒಂದಾಗಿರುವ ಉತ್ತರ ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಮಟ್ಕಾ, ಜೂಜು ಸೇರಿದಂತೆ ಅಪರಾಧಿ ಕೃತ್ಯಗಳು ಹೆಚ್ಚತೊಡಗಿತ್ತು. ಆದರೆ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಈ ಕಾನೂನುಬಾಹಿರ ಚಟುವಟಿಕೆಗಳಿಗೆ ಒಂದಿಷ್ಟು ಕಡಿವಾಣ ಹಾಕಿದ್ದಾರೆ. ಅಲ್ಲದೆ ಪೊಲೀಸ್ ಇಲಾಖೆಯೊಂದಿಗೆ ಜನರನ್ನು ಇನ್ನಷ್ಟು ಹತ್ತಿರವಾಗಿಸಲು ಮುಂದಾಗಿರುವ ಅವರು ಹೊಸ ತಂತ್ರಜ್ಞಾನದ ಮೂಲಕ ಜಿಲ್ಲೆಯಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಜನರಿಂದಲೇ ಮಾಹಿತಿ ಪಡೆಯಲು ಮುಂದಾಗಿದ್ದಾರೆ.
ದೂರುದಾರರ ಮಾಹಿತಿ ಗೌಪ್ಯ: ಸಾಮಾನ್ಯವಾಗಿ ಎಲ್ಲಿಯಾದರೂ ಕಾನೂನು ಉಲ್ಲಂಘನೆ ಕೃತ್ಯಗಳು ನಡೆಯುತ್ತಿದ್ದರೆ ಕೆಲವರು ಪೊಲೀಸ್ ಇಲಾಖೆಗೆ ಧೈರ್ಯವಾಗಿ ಮಾಹಿತಿ ನೀಡುತ್ತಾರೆ. ಆದರೆ ಇನ್ನು ಕೆಲವರು ತಾವು ಮಾಹಿತಿ ನೀಡಿದಲ್ಲಿ ತಮ್ಮನ್ನು ವಿಚಾರಣೆಗೆ ಕರೆಯುತ್ತಾರೋ, ತಮ್ಮ ಹೆಸರನ್ನು ಹೇಳಿಬಿಡುತ್ತಾರೋ ಎಂಬ ಭಯದಿಂದ ಅದೆಷ್ಟೋ ಮಂದಿ ನೋಡಿಯೂ ನೋಡದಂತೆ ಇರುತ್ತಾರೆ. ಆದರೆ ಇದೀಗ ಪೊಲೀಸ್ ಇಲಾಖೆ ಅನುಷ್ಠಾನಗೊಳಿಸಿದ 'ಪಬ್ಲಿಕ್ ಐ' ತಂತ್ರಜ್ಞಾನದಿಂದ ಇಂತಹ ಯಾವುದೇ ಸಮಸ್ಯೆ ಮಾಹಿತಿ ನೀಡಿದವರಿಗೆ ಆಗುವುದಿಲ್ಲ. ಬದಲಿಗೆ ದೂರು ನೀಡಿದವರ ಮಾಹಿತಿ ಗೌಪ್ಯವಾಗಿಟ್ಟು ಪೊಲೀಸರೇ ಖುದ್ದಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದಾರೆ.
ಈಗಾಗಲೇ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಆರಂಭಗೊಂಡಿರುವ ಈ ತಂತ್ರಜ್ಞಾನಕ್ಕೆ ಪೊಲೀಸ್ ಇಲಾಖೆ ಕ್ಯೂ ಆರ್ ಕೋಡ್ ಒಂದನ್ನು ಆರಂಭಿಸಿದೆ. ಇದನ್ನು ಸ್ಕ್ಯಾನ್ ಮಾಡಿದಾಗ 'ಪಬ್ಲಿಕ್ ಐ' ಮಾಹಿತಿ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಕಂಟ್ರೋಲ್ ರೂಮ್ ವಾಟ್ಸ್‌ಆ್ಯಪ್ ನಂ 8277988311 ಸಹಿತ ವಾಟ್ಸ್‌ಆ್ಯಪ್ ಪೇಜ್ ತೆರೆದುಕೊಳ್ಳುತ್ತದೆ. ಆಗ ಜನಸಾಮಾನ್ಯರು ಕಣ್ಣೆದುರು ನಡೆಯುವ ಯಾವುದೇ ಅಪರಾಧ ಕೃತ್ಯ ಅಥವಾ ತಮಗೆ ಮಾಹಿತಿ ಇರುವ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಗುಪ್ತವಾಗಿ ಮಾಹಿತಿ ನೀಡಬಹುದು.
ಜನರಿಗೆ ಬಹುಮಾನ ನೀಡಲಿರುವ ಇಲಾಖೆ: ಈ ವಾಟ್ಸ್‌ಆ್ಯಪ್ ನಂಬರ್‌ನಲ್ಲಿ ತಮಗೆ ಇರುವ ಮಾಹಿತಿಯ ಫೋಟೋ ತೆಗೆದು ಇಲ್ಲವೇ ಸ್ಥಳದ ಮಾಹಿತಿ ನೀಡಿದರೆ ಅದು ಸೋಶಿಯಲ್ ಮೀಡಿಯಾ ನಿಗಾವಣೆ ಘಟಕಕ್ಕೆ ಬರಲಿದೆ. ಇಲ್ಲಿ ಸಿಬ್ಬಂದಿ ದಿನದ 24 ಗಂಟೆಯೂ ಕೆಲಸ ಮಾಡುವ ಕಾರಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪೊಲೀಸ್ ಕಂಟ್ರೋಲ್ ರೂಮ್‌ಗೆ ರವಾನೆಯಾಗಲಿದೆ. ಬಳಿಕ ಸಂಬಂಧಪಟ್ಟ ಠಾಣೆಗೆ ಮಾಹಿತಿ ರವಾನೆಯಾಗಿ ತಕ್ಷಣ ಕ್ರಮ ಕೂಡ ಕೈಗೊಳ್ಳಲು ಪೊಲೀಸ್ ಇಲಾಖೆಗೆ ನೆರವಾಗಲಿದೆ. ಆದರೆ ಹೀಗೆ ಮಾಹಿತಿ ನೀಡಿದವರ ವಿವರ ಗೌಪ್ಯವಾಗಿಟ್ಟು ನೀಡಿದ ಮಾಹಿತಿ ಉತ್ತಮ ಹಾಗೂ ನೈಜವಾಗಿದ್ದರೆ ಅದರ ಮೂಲಕ ಅಪರಾಧ ತಡೆಯಾದರೆ ಜನರಿಗೆ ಬಹುಮಾನ ಕೂಡ ನೀಡಲು ಪೊಲೀಸ್ ಇಲಾಖೆ ಮುಂದಾಗಿದೆ.
ಇನ್ನು ಜಿಲ್ಲಾ ಕೇಂದ್ರದ ಸೋಶಿಯಲ್ ಮೀಡಿಯಾ ಘಟಕದಲ್ಲಿ 5 ಹಾಗೂ ಜಿಲ್ಲೆಯ 27 ಪೊಲೀಸ್ ಠಾಣೆಗಳಲ್ಲಿ ಇಬ್ಬರು ಸಿಬ್ಬಂದಿ ಮಾನಿಟರ್ ಮಾಡುತ್ತಿರುತ್ತಾರೆ. ಸದ್ಯ 'ಪಬ್ಲಿಕ್ ಐ' ಮೂಲಕ ಈಗಾಗಲೇ 150ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಅದರಲ್ಲಿ ಅಕ್ರಮ ಮರಳುಗಾರಿಕೆ, ಜೂಜು, ಗಂಡ- ಹೆಂಡತಿ ಜಗಳ, ನೆರೆ ಮನೆಯವರ ಕಿರಿಕಿರಿ ಮುಂತಾದ ದೂರುಗಳ ಬಗ್ಗೆ ಜನರು ಮಾಹಿತಿ ನೀಡಿದ್ದಾರೆ. ಹೀಗೆ ಬಂದ ಮಾಹಿತಿಯ ಕ್ಷಿಪ್ರ ಕಾರ್ಯಾಚರಣೆಗೆ 112ಗೆ ಕೂಡಾ ಸೂಚನೆ ನೀಡಿ ಪರಿಶೀಲಿಸಲಾಗುತ್ತದೆ. ಅಲ್ಲದೆ ಈ ಬಗ್ಗೆ ಮಾಹಿತಿ ನೀಡಿದವರಿಗೆ ಇಲಾಖೆಯಿಂದ ದೂರು ಅಂಗೀಕರಿಸಿದ ಬಗ್ಗೆ ಇಲ್ಲವೇ ಯಾಕೆ ಸಾಧ್ಯವಾಗಿಲ್ಲ ಎಂಬುದರ ಬಗ್ಗೆಯೂ ವಾಪಸ್ಸು ಮಾಹಿತಿ ನೀಡುವ ವ್ಯವಸ್ಥೆ ಕೂಡ ಇದರಲ್ಲಿದೆ.
"ಜನಸ್ನೇಹಿಯಾಗಿರುವ ಈ ತಂತ್ರಜ್ಞಾನದಿಂದಾಗಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ತ್ವರಿತವಾಗಿ ಮಾಹಿತಿ ಸಿಗಲಿದೆ. ಜೊತೆಗೆ ಜನರು ಪೊಲೀಸ್ ಠಾಣೆಗೆ ಅಲೆಯುವುದು ತಪ್ಪಲಿದೆ. ಜನರು ಈ ಬಗ್ಗೆ ಜಾಗೃತರಾಗಬೇಕು. ವ್ಹೀಲಿಂಗ್ ಮಾಡುವವರು, ಸಂಚಾರಿ ನಿಯಮ ಉಲ್ಲಂಘಿಸುವವರು, ಹೆಣ್ಣುಮಕ್ಕಳನ್ನು ಚುಡಾಯಿಸುವವರು ಹೀಗೆ ಯಾವುದೇ ರೀತಿಯ ಮಾಹಿತಿ ಇದ್ದರೂ ತಕ್ಷಣ ಮಾಹಿತಿ ನೀಡಬೇಕು. ಜಿಲ್ಲೆಯಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಕೃತ್ಯಗಳು ನಡೆಯುತ್ತಿದ್ದರೆ ಜನರು ಲೈವ್ ಆಗಿ ನಮಗೆ ಮಾಹಿತಿ ನೀಡಬಹುದಾಗಿದೆ. ಜಿಲ್ಲೆಯ ಪೊಲೀಸ್ ಇಲಾಖೆ 24 ಗಂಟೆಯೂ ಸಿದ್ಧವಿದೆ. ಸಾರ್ವಜನಿಕರು ಸಹಕಾರ ನೀಡಿದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬಹುದಾಗಿದೆ" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ತಿಳಿಸಿದ್ದಾರೆ.
ಪೊಲೀಸ್ ಠಾಣೆಗೂ ನೀಡಬಹುದು ರೇಟಿಂಗ್ಸ್: ಇನ್ನು ಜನರು ಪೊಲೀಸ್ ಠಾಣೆಗೆ ಭೇಟಿ ನೀಡಿದಾಗ ಅಲ್ಲಿ ತಮಗೆ ಸ್ಪಂದನೆ ಸಿಕ್ಕಿದೆಯೋ ಇಲ್ಲವೋ ಎಂಬುದರ ಬಗ್ಗೆ ಅನಿಸಿಕೆಗಳನ್ನು ನೀಡಲು ಈಗಾಗಲೇ ರಾಜ್ಯಾದ್ಯಂತ ಎಲ್ಲ ಠಾಣೆಗಳಲ್ಲಿಯೂ 'ಲೋಕಸ್ಪಂದನಾ' ಕ್ಯೂ ಆರ್ ಕೋಡ್ ಹಾಕಲಾಗಿದೆ. ಈ ತಂತ್ರಜ್ಞಾನದ ಮೂಲಕವೂ ಪೊಲೀಸ್ ಇಲಾಖೆಯಲ್ಲಿನ ವ್ಯವಸ್ಥೆ, ಸ್ಪಂದನೆ ಬಗ್ಗೆ ಜನರು ಪ್ರತಿಕ್ರಿಯೆ ನೀಡಬಹುದು. ಅಲ್ಲದೆ ಈ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದಾಗ ರೇಟಿಂಗ್ಸ್ ಕೂಡ ನೀಡಬಹುದಾಗಿದೆ. ಯಾವುದೇ ಠಾಣೆಗೆ 5 ಪಾಯಿಂಟ್ ಒಳಗೆ ಸ್ಟಾರ್ ಸಿಕ್ಕಿದರೆ ಆ ಠಾಣೆಯ ಅಧಿಕಾರಿ, ಸಿಬ್ಬಂದಿಯನ್ನು ಎಸ್ಪಿ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ.