ಶ್ರೀನಗರ: ಕಣಿವೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆ ಚುನಾವಣಾಪೂರ್ವ ಮೈತ್ರಿಗೆ ಕಾಂಗ್ರೆಸ್ ಸಜ್ಜಾಗಿದೆ. ಈ ಸಂಬಂಧ ನ್ಯಾಷನಲ್ ಕಾನ್ಫರೆನ್ಸ್ ಜೊತೆಗೆ ಮಾತುಕತೆ ನಡೆಸಲು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಇಂದು ಜಮ್ಮು ಮತ್ತು ಕಾಶ್ಮೀರಕ್ಕೆ ಬಂದಿಳಿದಿದ್ದಾರೆ. ಎರಡು ದಿನ ಅವರು ಈ ಕುರಿತು ವಿವಿಧ ಪಕ್ಷಗಳ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ.
ಸೀಟು ಹಂಚಿಕೆ ಚರ್ಚೆ: ಈ ಇಬ್ಬರು ನಾಯಕರು ಸೀಟು ಹಂಚಿಕೆ ಸಂಬಂಧ ಶ್ರೀನಗರದಲ್ಲಿ ಸ್ಥಳೀಯ ಪಕ್ಷಗಳ ಜೊತೆಗೆ ಮಾತುಕತೆ ನಡೆಸಲಿದ್ದಾರೆ. ಗುರುವಾರ ಜಮ್ಮುವಿಗೆ ತೆರಳಿ ಅಲ್ಲಿನ ರಾಜಕೀಯ ಪಕ್ಷ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ಭೇಟಿಯು ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ಗೆ (ಎನ್ಸಿ) ಮಹತ್ವವಾಗಿದ್ದು, ಅದರಲ್ಲೂ ಜಮ್ಮುವಿನಲ್ಲಿ ಚುನಾವಣಾ ಪೂರ್ವ ಮೈತ್ರಿ ಹಲವು ತಂತ್ರಗಾರಿಕೆಯಿಂದ ಕೂಡಿರಲಿದೆ. ಇಲ್ಲಿ ಬಿಜೆಪಿ ಬಹುಮತ ಪಡೆಯುವ ವಿಶ್ವಾಸವನ್ನು ಹೊಂದಿದೆ.
ಎನ್ಸಿ ನಾಯಕ ಮತ್ತು ಮಾಜಿ ಜಮ್ಮು ಮತ್ತು ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ ಇತ್ತೀಚಿಗೆ ಕಾಂಗ್ರೆನ್ನ ಪ್ರಮುಖ ನಾಯಕರ ಸಂಪರ್ಕದಲ್ಲಿದ್ದಾರೆ. ಜೊತೆಗೆ ಇತ್ತೀಚೆಗೆ ನೇಮಕವಾಗಿದ್ದ ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಅಧ್ಯಕ್ಷ ತರೀಖ್ ಹಮೀದ್ ಕರ್ರಾ, ತಾವು ಸಮಾನ ಮನಸ್ಕರ ಜೊತೆಗೆ ಚರ್ಚೆಗೆ ಮುಕ್ತವಾಗಿದ್ದೇವೆ ಎಂದಿದ್ದರು.
ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಹರಿಯಾಣ, ಮಹಾರಾಷ್ಟ್ರ ಮತ್ತು ಜಾರ್ಖಂಡ್ ಹಾಗೂ ಜಮ್ಮು ಮತ್ತು ಕಾಶ್ಮೀರದ ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ಮುಖ್ಯಸ್ಥರು ಮತ್ತು ಸ್ಕ್ರೀನಿಂಗ್ ಸಮಿತಿ ಸದಸ್ಯರ ಜೊತೆಗಿನ ಚರ್ಚೆ ಬಳಿಕ ಈ ಸಭೆಗಳು ನಡೆಸಲಾಗುತ್ತಿದೆ.