BJP attack on Rahul Gandhi - ನವದೆಹಲಿ: ಭಾರತದ ಪ್ರಜಾಪ್ರಭುತ್ವದಲ್ಲಿ ರಾಹುಲ್ ಗಾಂಧಿ ಒಬ್ಬರು ಕಪ್ಪು ಚುಕ್ಕೆ ಎಂದು ಬಿಜೆಪಿ ಟೀಕಿಸಿದೆ. ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ರಾಹುಲ್ ಗಾಂಧಿ ಭಾರತದ ಪ್ರಜಾಪ್ರಭುತ್ವ ದುರ್ಬಲಗೊಳಿಸುವ ಯತ್ನ ನಡೆಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿ ಪ್ರಬುದ್ಧತೆ ಇಲ್ಲ. ಅವರೊಬ್ಬ ಅರೆಕಾಲಿಕ ನಾಯಕ ಎಂಬುದು ಎಲ್ಲರಿಗೂ ತಿಳಿದಿದೆ. ಆದರೂ, ಜನರು ಅವರಿಗೆ ವಿಪಕ್ಷ ಸ್ಥಾನದಂತಹ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ಭಾರತದ ಪ್ರಜಾಪ್ರಭುತ್ವದಲ್ಲಿ ರಾಹುಲ್ ಗಾಂಧಿ ಕಪ್ಪು ಚುಕ್ಕೆ ಎಂದು ಹೇಳಲು ಬೇಸರವಾಗುತ್ತದೆ. ವಿದೇಶಕ್ಕೆ ಭೇಟಿ ನೀಡಿದಾಗ ಅವರಿಗೆ ಹೇಗೆ ಮಾತನಾಡಬೇಕು ಎಂಬುದು ಸಹ ತಿಳಿದಿಲ್ಲ ಎಂದು ಟೀಕಿಸಿದರು.
ರಾಹುಲ್ ಗಾಂಧಿ, ತಮ್ಮ ಭಾಷಣದಲ್ಲಿ ಚೀನಾದ ಬಗ್ಗೆ ಒಂದೇ ಒಂದು ಶಬ್ಧವನ್ನೂ ಅವರು ಮಾತನಾಡಲಿಲ್ಲ. ಭಾರತವನ್ನು ಅವರು ದುರ್ಬಲಗೊಳಿಸಿ, ಚೀನಾದ ಪರವಾಗಿದ್ದಾರೆ ಎಂದು ಟೀಕಿಸಿದ ಅವರು, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಚೀನಾದ ಜೊತೆಗೆ ಅವರ ಪಕ್ಷದ ಒಪ್ಪಂದ ಕುರಿತು ಮಾತನಾಡಿದರು.
ಆ ಒಪ್ಪಂದದ ಪರಿಣಾಮವಾಗಿ ಅವರು ಭಾರತದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಯತ್ನ ಮಾಡಿದ್ದಾರೆ. ಚೀನಾದೊಂದಿಗೆ ಮಾಡಿಕೊಂಡಿರುವ ಆ ಒಪ್ಪಂದವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಸಾರ್ವಜನಿಕಗೊಳಿಸುವಂತೆ ಸವಾಲು ಹಾಕುತ್ತೇನೆ ಎಂದು ಭಾಟಿಯಾ ಹೇಳಿದ್ದಾರೆ.