ಪುಣೆ (ಮಹಾರಾಷ್ಟ್ರ):ಭೂ ವಿವಾದಕ್ಕೆ ಸಂಬಂಧಿಸಿದಂತೆ ರೈತನಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ವಿವಾದಿತ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ತಂದೆ ದಿಲೀಪ್ ಖೇಡ್ಕರ್ ಅವರಿಗೆ ಜುಲೈ 25ರ ವರೆಗೆ ಮಹಾರಾಷ್ಟ್ರದ ಪುಣೆ ಸೆಷನ್ ನ್ಯಾಯಾಲಯವು ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ.
ಭೂ ವಿವಾದಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಕುಟುಂಬಸ್ಥರು ಸ್ಥಳೀಯ ರೈತನಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ಪ್ರಕರಣದಲ್ಲಿ ಪೂಜಾ ಖೇಡ್ಕರ್ ತಾಯಿ ಮನೋರಮಾ ಖೇಡ್ಕರ್ ಅವರನ್ನು ಗುರುವಾರ ಬಂಧಿಸಲಾಗಿದ್ದು, ಜುಲೈ 20ರ ವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಇದರ ನಡುವೆ ತಂದೆ ದುಲೀಪ್ ಖೇಡ್ಕರ್ ಶುಕ್ರವಾರ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.
ಖೇಡ್ಕರ್ ಕಂಪನಿಗೆ ಸೀಲ್: ಮತ್ತೊಂದೆಡೆ, ಪುಣೆಯಲ್ಲಿರುವ ಮನೋರಮಾ ಖೇಡ್ಕರ್ ಸೇರಿದ 'ಥರ್ಮೋವೆರಿಟಾ' ಎಂಬ ಕಂಪನಿಗೆ ಪಿಂಪ್ರಿ ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್ (ಪಿಸಿಎಂಸಿ) ಬೀಗ ಜಡಿದಿದೆ. ಥರ್ಮೋವೆರಿಟಾ ಇಂಡಿಯಾ ಪ್ರೈ. ಲಿಮಿಟೆಡ್ ಕಂಪನಿಯು ಕಳೆದ ಎರಡು ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಹೆಚ್ಚುವರಿಯಾಗಿ ಪ್ರಸಕ್ತ ವರ್ಷದ ಬಾಕಿಯನ್ನು ಸಹ ಪಾವತಿಸಿಲ್ಲ ಎಂದು ಪಿಸಿಎಂಸಿ ಆಯುಕ್ತ ಶೇಖರ್ ಸಿಂಗ್ ಹೇಳಿದ್ದಾರೆ.
2023ರಲ್ಲಿ ತೆರಿಗೆ ಬಾಕಿ ಪಾವತಿಯಾಗದೇ ಇರುವುದರಿಂದ ನಾವು ಆರಂಭದಲ್ಲೇ ನೋಟಿಸ್‌ಗಳನ್ನು ನೀಡಿದ್ದೇವೆ. ಅಲ್ಲದೇ, ನೀರಿನ ಸಂಪರ್ಕವನ್ನು ಕಡಿತಗೊಳಿಸಿದ್ದೇವೆ. ಕಳೆದ ಎರಡು ವರ್ಷಗಳಿಂದ ಒಟ್ಟು 1.96 ಲಕ್ಷ ರೂ. ಬಾಕಿ ಉಳಿದಿದ್ದು, ಪ್ರಸಕ್ತ ವರ್ಷದ ಬಾಕಿ ಸೇರಿದಂತೆ ಒಟ್ಟು 2.77 ಲಕ್ಷ ರೂ. ಬಾಕಿ ಇದೆ. ಹೀಗಾಗಿ ನಮ್ಮ ಮುಂದಿನ ಕ್ರಮವಾಗಿ ಕಂಪನಿಗೆ ಸೀಲ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪೂಜಾ ಖೇಡ್ಕರ್ ವಿವಾದ: ಪ್ರೊಬೇಷನರಿ ಐಎಎಸ್ ಅಧಿಕಾರಿಯಾದ ಪೂಜಾ ಖೇಡ್ಕರ್ ಹಲವು ವಿವಾದಗಳಿಂದಲೇ ಸುದ್ದಿಯಲ್ಲಿದ್ದಾರೆ. ಪ್ರಮುಖವಾಗಿ ಅಂಗವೈಕಲ್ಯ ಪ್ರಮಾಣಪತ್ರ ಪಡೆದ ಆರೋಪವನ್ನು ಎದುರಿಸುತ್ತಿದ್ದಾರೆ. ಈ ಸಂಬಂಧ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಶುಕ್ರವಾರ ಪೂಜಾ ಖೇಡ್ಕರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಅಷ್ಟೇ ಅಲ್ಲ, ಆಕೆಯ ಆಯ್ಕೆ ರದ್ದುಪಡಿಸಲು ಮತ್ತು ಭವಿಷ್ಯದ ಪರೀಕ್ಷೆಗಳಿಂದ ಡಿಬಾರ್‌ಮೆಂಟ್ ಮಾಡಬಾರದು ಎಂದು ಶೋಕಾಸ್ ನೋಟಿಸ್ ಕೂಡ ಯುಪಿಎಸ್‌ಸಿ ಜಾರಿ ಮಾಡಿದೆ.
ಪ್ರಾಥಮಿಕ ತನಿಖೆಯಲ್ಲಿ ಪೂಜಾ ಖೇಡ್ಕರ್ ತನ್ನ ಹೆಸರು, ತಂದೆ ಮತ್ತು ತಾಯಿಯ ಹೆಸರು, ಆಕೆಯ ಭಾವಚಿತ್ರ ಅಥವಾ ಸಹಿ, ಆಕೆಯ ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಇತ್ಯಾದಿಗಳನ್ನು ಬದಲಾಯಿಸುವ ಮೂಲಕ ತನ್ನ ಗುರುತನ್ನು ನಕಲಿ ಮಾಡಿ ಪರೀಕ್ಷಾ ನಿಯಮಗಳ ಮೀರಿ ವಂಚನೆ ಮಾಡಿದ್ದಾರೆ ಎಂದು ಆಯೋಗ ತಿಳಿಸಿದೆ.
ಇದನ್ನೂ ಓದಿ:ಪೂಜಾ ಖೇಡ್ಕರ್‌ಗೆ UPSC ಶಾಕ್: ನಕಲಿ ಪ್ರಮಾಣಪತ್ರದ ವಿರುದ್ಧ ಪ್ರಕರಣ ದಾಖಲು, ಶೋಕಾಸ್ ನೋಟಿಸ್ ಜಾರಿ