ವಯನಾಡು (ಕೇರಳ):ವಯನಾಡು ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಿ, ಬೃಹತ್ ಸಮಾವೇಶದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ನನ್ನ ಹೊಸ ಪ್ರಯಾಣ ಆರಂಭವಾಗಿದ್ದು, ನನಗೆ ಮಾರ್ಗದರ್ಶಕರು ನೀವೇ ಎಂದು ವಯನಾಡಿನ ಜನಕ್ಕೆ ತಿಳಿಸಿದರು.
ನಾಮಪತ್ರ ಸಲ್ಲಿಕೆಗೆ ಮುನ್ನ ತಮ್ಮ ಚೊಚ್ಚಲ ಭಾಷಣ ಮಾಡಿದ ಅವರು, 'ಇದು ನನ್ನ ಹೊಸ ಪಯಣ. ನೀವೇ ನನ್ನ ಮಾರ್ಗದರ್ಶಕರು. ಇದು ನನಗೆ ಜವಾಬ್ದಾರಿ ಕೂಡ. ನಮ್ಮ ಕುಟುಂಬ ನಡುವಿನ ನಂಬಿಕೆಯ ಸಂಕೇತ ನೀವು. ಇಬ್ಬರು ಮಕ್ಕಳ ತಾಯಿಯಾಗಿರುವ ನಾನು ಅವರ ಅವಶ್ಯಕತೆ ಇದ್ದಾಗಲೆಲ್ಲ ಜೊತೆಯಾಗಿದ್ದೇನೆ. ಇದೀಗ ನಿಮ್ಮ ಅವಶ್ಯಕತೆಗೆ ಜೊತೆಯಾಗುತ್ತಿದ್ದೇನೆ. ನಿಮಗಾಗಿ ನಾನು ಹೋರಾಡುತ್ತೇನೆ. ನಿಮ್ಮ ಹೋರಾಟದಲ್ಲಿ ನಾನು ಮುಂದಾಗುತ್ತೇನೆ. ನಿಮ್ಮನ್ನು ನಾನು ಬೀಳದಂತೆ ಕಾಪಾಡುತ್ತೇನೆ. ಯುಡಿಎಫ್ ಅಭ್ಯರ್ಥಿಯಾಗಿ ನನ್ನನ್ನು ನೀವು ಸ್ವೀಕಾರ ಮಾಡಿದ್ದಕ್ಕೆ ಹೃದಯಾಂತರಾಳದಿಂದ ಧನ್ಯವಾದ ತಿಳಿಸುತ್ತೇನೆ' ಎಂದರು.
35 ವರ್ಷದ ರಾಜಕೀಯ ಅನುಭವ: 17ನೇ ವಯಸ್ಸಿನಲ್ಲಿ ಮೊದಲ ಬಾರಿಗೆ 1989ರಲ್ಲಿ ನನ್ನ ತಂದೆ ಜೊತೆಗೆ ಪ್ರಚಾರ ಆರಂಭಿಸಿದೆ. ಅಲ್ಲಿಂದ ಇಲ್ಲಿಯವರೆಗೆ ನನ್ನ ತಾಯಿ ಮತ್ತು ಸಹೋದರನಿಗಗಾಗಿ ಅನೇಕ ಪ್ರಚಾರ ನಡೆಸಿದ್ದು, 35 ವರ್ಷದ ರಾಜಕೀಯ ಅನುಭವ ನನಗಿದೆ.
ಅವಕಾಶ ನೀಡಿದ್ದಕ್ಕೆ ದಶಕಗಳ ಬಳಿಕ ಸೋನಿಯಾ ಗಾಂಧಿ ರಾಜ್ಯಕ್ಕೆ ಆಗಮಿಸಿದ್ದು, ಪ್ರಿಯಾಂಕಾ ಗಾಂಧಿ ಪರ ಪ್ರಚಾರದಲ್ಲಿ ಭಾಗಿಯಾದರು. ಈ ಕುರಿತು ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ನನ್ನ ತಾಯಿ ನನ್ನ ಪರ ಪ್ರಚಾರಕ್ಕೆ ಆಗಮಿಸಿದ್ದು, ಇದೊಂದು ವಿಭಿನ್ನ ಅನುಭವ ಆಗಿದೆ. ಯುಡಿಎಫ್ ಅಭ್ಯರ್ಥಿಯಾಗಿ ಕಾಂಗ್ರೆಸ್ ಅಧ್ಯಕ್ಷರು ನನಗೆ ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು. ನಿಮ್ಮನ್ನು ಪ್ರತಿನಿಧಿಸುವುದು ನನಗೆ ದೊಡ್ಡ ಗೌರವ ಆಗಿರಲಿದೆ ಎಂದರು.