ನವದೆಹಲಿ:ಯುದ್ಧಪೀಡಿತ ಪ್ಯಾಲೆಸ್ಟೈನ್ಗೆ ಬೆಂಬಲ ಸೂಚಿಸಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ವಾದ್ರಾ ಅವರು 'ಪ್ಯಾಲೆಸ್ಟೈನ್' ಎಂಬ ಬರಹವುಳ್ಳ ವಿಶೇಷವಾಗಿ ರಚಿಸಿದ ಕೈಚೀಲವನ್ನು (ಬ್ಯಾಗ್) ಸೋಮವಾರ ಸಂಸತ್ತಿಗೆ ತಂದಿದ್ದಾರೆ. ಇದು ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದು, 'ಅತಿಯಾದ ಕೋಮು ಓಲೈಕೆ' ಎಂದು ಬಿಜೆಪಿ ಟೀಕಿಸಿದೆ.
ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಮಾತನಾಡಿ ಗಮನ ಸೆಳೆದಿದ್ದ ಪ್ರಿಯಾಂಕಾ ವಾದ್ರಾ ಇಂದು ಪ್ಯಾಲೆಸ್ಟೈನ್ ಬ್ಯಾಗ್ನಿಂದ ಟೀಕೆಗೆ ಗುರಿಯಾದರು.
ವಯನಾಡ್ ಸಂಸದೆ, ಗಾಜಾದಲ್ಲಿ ಇಸ್ರೇಲ್‌ನ ಕ್ರಮಗಳ ವಿರುದ್ಧ ಈ ಹಿಂದಿನಿಂದಲೂ ಧ್ವನಿ ಎತ್ತುತ್ತಾ ಬಂದಿದ್ದಾರೆ. ಅಲ್ಲಿನ ಜನರು ಮಾರಣಹೋಮದ ವಿರುದ್ಧ ಇಡೀ ವಿಶ್ವವೇ ಖಂಡಿಸಬೇಕು. ಅಲ್ಲಿನ ನಾಗರಿಕರು, ಮಹಿಳೆ, ಪುರುಷ, ವೈದ್ಯರು, ದಾದಿಯರು, ಪತ್ರಕರ್ತರು, ಶಿಕ್ಷಕರು, ಬರಹಗಾರರು, ಕವಿಗಳು, ಮುಗ್ಧ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಈ ನರಮೇಧ ನಿಲ್ಲಬೇಕು ಎಂದು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ಕಚೇರಿಗೆ ಕರೆಸಿ ಅಭಿನಂದಿಸಿದ್ದ ಪ್ಯಾಲೆಸ್ಟೈನ್ ರಾಯಭಾರಿ:ಇತ್ತೀಚೆಗೆ ನಡೆದ ವಯನಾಡ್ ಲೋಕಸಭೆಯಲ್ಲಿ ಗೆಲುವು ಸಾಧಿಸಿದ ಪ್ರಿಯಾಂಕಾ ವಾದ್ರಾ ಅವರಿಗೆ ಪ್ಯಾಲೆಸ್ಟೈನ್ ರಾಯಭಾರಿ ಅಭಿನಂದನೆ ಸಲ್ಲಿಸಿದ್ದರು. ನವದೆಹಲಿಯಲ್ಲಿನ ಪ್ಯಾಲೆಸ್ಟೈನ್ ರಾಯಭಾರ ಕಚೇರಿಗೆ ಪ್ರಿಯಾಂಕಾರನ್ನು ಕರೆಸಿಕೊಂಡಿದ್ದ ರಾಯಭಾರಿಯು ಚುನಾವಣಾ ಗೆಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.