ನವದೆಹಲಿ: ಕೃತಕ ಬುದ್ಧಿಮತ್ತೆಯಿಂದ (ಎಐ) ಹವಾಮಾನ ವೈಪರೀತ್ಯ ಸೇರಿದಂತೆ ಅನೇಕ ಪ್ರಮುಖ ವಿಚಾರಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಚರ್ಚೆ ನಡೆಸಿದ್ದಾರೆ. ಪ್ರಧಾನಿ ನಿವಾಸದಲ್ಲಿ ನಡೆದ ಈ ಸಂವಾದದ ಟೀಸರ್ ಅನ್ನು ಮಾರ್ಚ್ 28ರಂದು ಬಿಡುಗಡೆ ಮಾಡಲಾಗಿದ್ದು, ಇಂದು ಈ ಸಂವಾದದ ವಿಡಿಯೋ ಪ್ರಧಾನಿ ಎಕ್ಸ್ ಖಾತೆಯಲ್ಲಿ ಲಭ್ಯವಿದೆ.
2023 ಜಿ20 ಶೃಂಗಸಭೆ:ಭಾರತದ ಅಧ್ಯಕ್ಷತೆಯಲ್ಲಿ 2023ರಲ್ಲಿ ನಡೆದ ಜಿ20 ಶೃಂಗಸಭೆ ಕುರಿತು ಮಾತನಾಡಿರುವ ಮೋದಿ, ಶೃಂಗಸಭೆಗೂ ಮುನ್ನ ಹಲವು ವಿಸ್ತಾರವಾದ ಚರ್ಚೆಗಳನ್ನು ನಾವು ನಡೆಸಿದ್ದೆವು. ನೀವೂ ಅದನ್ನು ಗಮನಿಸಿರಬಹುದು. ಶೃಂಗಸಭೆಯ ಪ್ರಕ್ರಿಯೆಗಳು ಅನೇಕ ತಿರುವುಗಳನ್ನು ಪಡೆದವು. ನಾವು ಜಿ20ಯ ಪ್ರಮುಖ ಉದ್ದೇಶ, ಗುರಿಗಳನ್ನು ಅರ್ಥಮಾಡಿಕೊಂಡಿದ್ದೇವೆ ಎಂದು ನಂಬುತ್ತೇನೆ. ಇದು ನಮ್ಮನ್ನು ಮುಖ್ಯಭೂಮಿಕೆಗೆ ಕರೆತಂದಿತು ಎಂದರು.
ಮೋದಿ ಮಾತಿಗೆ ಪ್ರತಿಕ್ರಿಯಿಸಿದ ಗೇಟ್ಸ್, ಜಿ20 ಹೆಚ್ಚು ಅಂತರ್ಗತವಾಗಿದ್ದು, ಭಾರತದ ನೇತೃತ್ವದಲ್ಲಿ ಅದ್ಭುತವಾಗಿ ನಡೆಯಿತು. ಶೃಂಗಸಭೆಯಲ್ಲಿ ಡಿಜಿಟಲ್ ಆವಿಷ್ಕಾರಗಳಿಗೆ ವಿಶೇಷ ಒತ್ತು ನೀಡಲಾಗಿದೆ. ದೇಶದಲ್ಲಿ ನೀವು ಸಾಧಿಸಿರುವ ಹಿಂದಿನ ಫಲಿತಾಂಶಗಳ ಬಗ್ಗೆಯೂ ನಮ್ಮ ಫೌಂಡೇಷನ್ ಉತ್ಸುಕವಾಗಿದೆ ಎಂದು ಹೇಳಿದರು.
ಭಾರತದಲ್ಲಿ ಡಿಜಿಟಲ್ ಕ್ರಾಂತಿ: ಇಬ್ಬರು ನಾಯಕರು ಭಾರತದಲ್ಲಿನ ಡಿಜಿಟಲ್ ಕ್ರಾಂತಿಯ ಜತೆಗೆ ಆರೋಗ್ಯ, ಕೃಷಿ ಮತ್ತು ಶಿಕ್ಷಣ ವಲಯದ ಕುರಿತು ಚರ್ಚಿಸಿದರು. ಇಂಡೋನೇಷ್ಯಾದಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಜಗತ್ತಿನೆಲ್ಲೆಡೆಯ ಪ್ರತಿನಿಧಿಗಳು ಭಾರತದ ಡಿಜಿಟಲ್ ಕ್ರಾಂತಿ ಬಗ್ಗೆ ಕುತೂಹಲ ಹೊಂದಿದ್ದರು. ಏಕಸ್ವಾಮ್ಯವನ್ನು ತಡೆಯುವ ಉದ್ದೇಶದಿಂದ ನಾವು ತಂತ್ರಜ್ಞಾನವನ್ನು ಪ್ರಜಾಪ್ರಭುತ್ವಗೊಳಿಸಿದ್ದೇವೆ ಎಂದು ನಾನು ಅವರಿಗೆ ವಿವರಿಸಿದೆ. ಇದು ಜನರಿಂದ ಜನರಿಗಾಗಿ ಇದೆ ಎಂದು ಬೀಲ್ಗೇಟ್ಸ್ ತಿಳಿಸಿದರು.
ಕೋವಿಡ್ ಸಂದರ್ಭದಲ್ಲಿ ಭಾರತ:ಸಂವಾದದಲ್ಲಿ ಪ್ರಧಾನಿ ಮೋದಿ, ಕೋವಿಡ್ 19 ಸಾಂಕ್ರಾಮಿಕತೆಯ ಸಮಯದಲ್ಲಿ ಲಸಿಕೆ ತಯಾರಿ ಕುರಿತು ಮೆಲುಕು ಹಾಕಿದರು. ಮೊದಲಿಗೆ ನಾವು ವೈರಸ್ ವಿರುದ್ಧ ಹೇಗೆ ಹೋರಾಡಬೇಕು ಎಂಬುದಕ್ಕೆ ಒತ್ತು ನೀಡಿದೆವು. ಇದು ಸರ್ಕಾರ ವರ್ಸಸ್ ವೈರಸ್ ಅಲ್ಲ. ಬದಲಾಗಿ ವೈರಸ್ ವರ್ಸಸ್ ಜೀವನದ ಹೋರಾಟ. ಇದು ನನ್ನ ಮೊದಲ ತತ್ವವಾಗಿತ್ತು. ಈ ನಿಟ್ಟಿನಲ್ಲಿ ಮೊದಲ ದಿನದಿಂದಲೇ ನನ್ನ ದೇಶದ ಜನರೊಂದಿಗೆ ನೇರವಾಗಿ ಸಂವಹನ ನಡೆಸಲು ಶುರು ಮಾಡಿದೆ. ಸಾರ್ವಜನಿಕವಾಗಿ ನಾನು ಎಲ್ಲಾ ಶಿಷ್ಟಾಚಾರಗಳನ್ನು ಪಾಲಿಸಿದೆ. ಅವರಿಗೆ ತಾಲಿ ಬಜಾವೋ (ಚಪ್ಪಾಳೆ ತಟ್ಟಿ) ಎಂದೆ. ಇದನ್ನು ಕೆಲವರು ಅಪಹಾಸ್ಯ ಮಾಡಿದರು. ಆದರೆ, ಜನರು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡರು ಎಂದು ಮೋದಿ ವಿವರಿಸಿದರು.