ಕರ್ನಾಟಕ

karnataka

ETV Bharat / bharat

ಪ್ಯಾರಿಸ್​ ಒಲಿಂಪಿಕ್ಸ್​ ಬಳಿಕ ಚೂರ್ಮ ಸವಿಯೋಣ: ಪ್ರಧಾನಿ ಜೊತೆ ನೀರಜ್ ಚೋಪ್ರಾ ಮಾತು - Modi With Olympics Contingent

ಪ್ಯಾರಿಸ್​ ಒಲಿಂಪಿಕ್ಸ್​ 2024ಕ್ಕೆ ಅಣಿಯಾಗುತ್ತಿರುವ ಕ್ರೀಡಾಪಟುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಸಂವಾದ ನಡೆಸಿ, ಹುರಿದುಂಬಿಸಿದರು.

prime-minister-narendra-modi-interacted-with-indias-paris-olympics-2024-contingent
ನೀರಜ್​ ಚೋಪ್ರಾ ಜೊತೆ ಪ್ರಧಾನಿ ಮೋದಿ ಸಂವಾದ (IANS)

By ETV Bharat Karnataka Team

Published : Jul 5, 2024, 1:22 PM IST

ನವದೆಹಲಿ:ಪ್ಯಾರಿಸ್​ ಒಲಿಂಪಿಕ್ಸ್​ಗೆ ತೆರಳುತ್ತಿರುವ ಭಾರತೀಯ ಅಥ್ಲೀಟ್‌​ಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ದೇಶ ಗರ್ವಪಡುವಂಥ ಸಾಧನೆ ಮಾಡಿ ಎಂದು ಪ್ರೋತ್ಸಾಹಿಸಿದರು.

ಇಂದು ತಮ್ಮ ನಿವಾಸದಲ್ಲಿ ವರ್ಲ್ಡ್​​ ಚಾಂಪಿಯನ್​ ಜಾವೆಲಿನ್​ ಥ್ರೋ ಪಟು ನೀರಜ್​ ಚೋಪ್ರಾ, ಒಲಿಂಪಿಕ್​ ಪದಕ ವಿಜೇತೆ ಪಿ.ವಿ.ಸಿಂಧು, ಲೊವಿನಾ ಬೊರ್ಗೊಹೈನ್​ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಅವರು ಸಂವಾದ ನಡೆಸಿದರು.

ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ ಅಂಗಳ​ ಪ್ರವೇಶಿಸುತ್ತಿರುವ ಕ್ರೀಡಾಪಟುಗಳೊಂದಿಗೆ ಹೆಚ್ಚು ಮಾತುಕತೆ ನಡೆಸಿದ ಮೋದಿ, ಪದಕದೊಂದಿಗೆ ನಿಮ್ಮನ್ನು ಸ್ವಾಗತಿಸುತ್ತೇವೆ. ದೇಶದ ಧ್ವಜವನ್ನು ನಿಮ್ಮ ಮನಸ್ಸಿನಲ್ಲಿಟ್ಟುಕೊಂಡು ಗುರಿ ಈಡೇರಿಸಿಕೊಳ್ಳಿ ಎಂದು ಉತ್ತೇಜಿಸಿದರು. ನಿಮ್ಮ ಪ್ರಗತಿಗೆ ಅಡ್ಡಿಯಾಗುವಂತಹ ಘಟನೆಗಳು ನಡೆದಾಗ ನಿಮ್ಮನ್ನು ದೂಷಿಸಿಕೊಳ್ಳಬೇಡಿ ಎಂದೂ ಇದೇ ವೇಳೆ ಕಿವಿಮಾತು ಹೇಳಿದರು.

ನೀರಜ್‌ ಚೋಪ್ರಾ ಜೊತೆ ಮಾತನಾಡುತ್ತಾ, ಹರಿಯಾಣದ ಚೂರ್ಮಾ (ಸಿಹಿ ತಿನಿಸು) ಇನ್ನೂ ನನಗೆ ತಲುಪಿಲ್ಲ ಎಂದು ಮೋದಿ ಚಟಾಕಿ ಹಾರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನೀರಜ್​, ಕಳೆದ ಬಾರಿ ದೆಹಲಿ ತಿನಿಸು ತಿಂದೆವು. ಈ ಬಾರಿ ಒಲಿಂಪಿಕ್ಸ್​ನಲ್ಲಿ ಉತ್ತಮ ಪ್ರದರ್ಶನ ತೋರಿ ಮರಳಿದ ಬಳಿಕ ಮನೆಯಲ್ಲಿ ತಯಾರಿಸಿದ ಹರಿಯಾಣದ ಚೂರ್ಮಾ ಸವಿಯೋಣ ಎಂದು ಭರವಸೆ ನೀಡಿದರು.

ಮುಂದುವರೆದು ಮಾತನಾಡಿದ ಚೋಪ್ರಾ, ತಮ್ಮ ಸಿದ್ಧತೆಯ ಬಗ್ಗೆ ಪ್ರಧಾನಿಗೆ ವಿವರಿಸಿದರು. ಜರ್ಮನಿಯಲ್ಲಿ ಉತ್ತಮ ತರಬೇತಿ ಸಾಗುತ್ತಿದೆ. ಗಾಯದಿಂದ ಮುಕ್ತವಾಗಿರಲು ಪ್ರಯತ್ನಿಸುತ್ತಿದ್ದೇನೆ. ಇತ್ತೀಚಿಗೆ ಫಿನ್​ಲ್ಯಾಂಡ್​ನಲ್ಲಿ ನಡೆದ ಪವೊ ನುರ್ಮಿ ಗೇಮ್ಸ್​​ನಲ್ಲಿ ಪದಕ ಪಡೆದೆ ಎಂದು ಹೇಳಿದರು.

ಒಲಂಪಿಕ್ಸ್​ ಕ್ರೀಡಾಪಟುಗಳಿಗೆ ಸ್ಪೂರ್ತಿ ತುಂಬಿದ ನೀರಜ್​ ಚೋಪ್ರಾ, ನನ್ನ ಮೊದಲ ಒಲಿಂಪಿಕ್ಸ್​​ನಲ್ಲಿ ನನ್ನ ಆಟ ಮತ್ತು ತರಬೇತಿಯಲ್ಲಿ ನಂಬಿಕೆ ಇಟ್ಟು ಧೈರ್ಯದಿಂದ ಪ್ರದರ್ಶನ ತೋರಿಸಿದೆ. ಪ್ರತಿಯೊಬ್ಬ ಕ್ರೀಡಾಪಟು ಕೂಡಾ ಆತ್ಮವಿಶ್ವಾಸದಿಂದ ಪ್ರದರ್ಶನ ತೋರಬೇಕು. ವಿದೇಶಿ ಅಥ್ಲೀಟ್​ಗಳಿಗೆ ಭಯ ಪಡಬೇಡಿ ಎಂದು ಸಲಹೆ ನೀಡಿದರು.

ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.​​ಸಿಂಧು ಮಾತನಾಡಿ, ಈ ಬಾರಿ ಚಿನ್ನದ ಪದಕ ಗೆಲ್ಲುವ ಗುರಿ ಹೊಂದಿದ್ದೇನೆ. ಈ ಒಲಿಂಪಿಕ್ಸ್‌​​ ನನಗೆ ಹ್ಯಾಟ್ರಿಕ್ ಗೆಲುವು ತಂದುಕೊಡುವ​ ಭರವಸೆ ಇದೆ ಎಂದು ತಿಳಿಸಿದರು. 2016ರಲ್ಲಿ ನಾನು ನನ್ನ ಮೊದಲ ಒಲಿಂಪಿಕ್ಸ್‌​ನಲ್ಲಿ ಬೆಳ್ಳಿ ಪಡೆದೆ, ಬಳಿಕ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್​ನಲ್ಲಿ ಕಂಚು ಗೆದ್ದೆ. ಇದೀಗ ಚಿನ್ನದ ಮೇಲೆ ಗುರಿ ಹೊಂದಿದ್ದೇನೆ ಎಂದರು.

ಜುಲೈ 26ರಿಂದ ಆರಂಭವಾಗಲಿರುವ ಪ್ಯಾರಿಸ್​ ಒಲಿಂಪಿಕ್ಸ್​ 2024 ಆಗಸ್ಟ್​ 11ರಂದು ಮುಕ್ತಾಯಗೊಳ್ಳಲಿದೆ.(ಎಎನ್​ಐ)

ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿ ಮಾಡಿದ ಟೀಂ ಇಂಡಿಯಾ : ವಿಡಿಯೋ ರಿಲೀಸ್​

ABOUT THE AUTHOR

...view details