ನವದೆಹಲಿ:ಮಾಜಿ ಪ್ರಧಾನಿ ಮತ್ತು ಬಿಜೆಪಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಿದರು. ವಾಜಪೇಯಿ ಅವರ ಸ್ಮಾರಕ 'ಸದೈವ್ ಅಟಲ್'ಗೆ ಕೇಂದ್ರ ಸಚಿವರು ಸೇರಿದಂತೆ ಇತರ ಗಣ್ಯರು ಮತ್ತು ವಿವಿಧ ಪಕ್ಷಗಳ ಮುಖಂಡರು ನಮನ ಸಲ್ಲಿಸಿದರು.
"ಅಟಲ್ ಜಿ ಅವರಿಗೆ ಪುಣ್ಯ ತಿಥಿಯಂದು ನಮನಗಳು. ರಾಷ್ಟ್ರ ನಿರ್ಮಾಣಕ್ಕೆ ಅವರು ನೀಡಿದ ಅಪ್ರತಿಮ ಕೊಡುಗೆಗಳಿಂದ ಅಸಂಖ್ಯಾತ ಜನರು ಅವರನ್ನು ಸ್ಮರಿಸುತ್ತಿದ್ದಾರೆ. ಜನರಿಗೆ ಉತ್ತಮ ಗುಣಮಟ್ಟದ ಜೀವನ ನೀಡಲು ಅವರು ತಮ್ಮ ಇಡೀ ಜೀವನವನ್ನೇ ಜನಸೇವೆಗೆ ಮುಡಿಪಾಗಿಟ್ಟಿದ್ದರು. ದೇಶದ ಬಗ್ಗೆ ಹೊಂದಿದ್ದ ದೃಷ್ಟಿಕೋನದ ಈಡೇರಿಕೆಗೆ ನಾವು ಕೆಲಸ ಮಾಡುತ್ತೇವೆ. ಇಂದು ಬೆಳಗ್ಗೆ 'ಸದೈವ್ ಅಟಲ್' ನಲ್ಲಿ ಇತರ ಗಣ್ಯರೊಂದಿಗೆ ಅವರಿಗೆ ನಮನ ಸಲ್ಲಿಸಲಾಯಿತು'' ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.